ಹುಬ್ಬಳ್ಳಿಯ ಬಿಆರ್ಟಿಎಸ್ (BRTS) ಡಿಪೋದಲ್ಲಿ ಅಪರೂಪದ ಘಟನೆ ನಡೆದಿದೆ. ಎರಡು ಚಿಗರಿ ಬಸ್ಗಳ ಮಧ್ಯೆ ಅಪಘಾತವಾಗಿದ್ದ ಹಿನ್ನೆಲೆ, ಚಾಲಕರಿಗೆ ಅಧಿಕಾರಿಗಳಿಂದ “ಸನ್ಮಾನ” ಎನ್ನುವ ನೆಪದಲ್ಲಿ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ನಿನ್ನೆ ನಡೆದ ಘಟನೆದಲ್ಲಿ, ಮುಂದೆ ಹೋಗುತ್ತಿದ್ದ ಬಸ್ ತೀವ್ರ ಬ್ರೇಕ್ ಹಾಕಿದಾಗ, ಹಿಂದಿನ ಬಸ್ನ ಚಾಲಕನ ನಿಯಂತ್ರಣ ತಪ್ಪಿ ಬ್ರೇಕ್ ನಿಲ್ಲದ ಕಾರಣ, ಮುಂದಿನ ಬಸ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗದಿದ್ದರೂ, ಒಂದು ಬಸ್ನ ಹಿಂದಿನ ಗ್ಲಾಸ್ ಜಖಂಗೊಂಡಿದೆ.

ಈ ಅಪಘಾತದ ನಂತರ, ಇಬ್ಬರು ಚಾಲಕರನ್ನು ಡಿಪೋಗೆ ಕರೆಯಿಸಿಕೊಂಡು, ಅವರ ಮುಂದೆ ಬಸ್ಗಳ ಎದುರು ನಿಲ್ಲಿಸಿ ಮಾಲೆ ಹಾಕಿ “ಸನ್ಮಾನ” ಮಾಡುವ ಹೆಸರಿನಲ್ಲಿ ಚಿತ್ರ ತೆಗೆದು ಗ್ರೂಪ್ಗಳಿಗೆ ಹಂಚಿರುವುದು, ಚಾಲಕರಲ್ಲಿ ಆಕ್ರೋಶ ಉಂಟುಮಾಡಿದೆ. ಚಾಲಕರು ಇದನ್ನು ಉದ್ದೇಶಪೂರ್ವಕ ಅವಮಾನವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ವಿರುದ್ಧ ಆಕ್ರೋಶಗೊಂಡ ಚಾಲಕರು, ಶೀಘ್ರದಲ್ಲೇ ಬಸ್ಗಳನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ. ತಮ್ಮನ್ನು ಅವಮಾನಿಸಿದ ಅಧಿಕಾರಿಗಳಿಗೆ ಪಾಠ ಕಲಿಸಲು ಬೀದಿಗಿಳಿಯುವುದಾಗಿ ಘೋಷಿಸಿದ್ದಾರೆ.
“ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಸನ್ಮಾನಿಸುವ ನಾಟಕ ಮಾಡಿದರು. ಆದರೆ ಇದು ನಮಗೆ ಅಪಮಾನವಾಗಿದೆ. ಮಾಲೆ ಹಾಕಿ ಪೋಟೋ ತೆಗೆದು ಗ್ರೂಪ್ಗಳಿಗೆ ಹಾಕುವುದು ನಮ್ಮ ಮಾನಕ್ಕೆ ಧಕ್ಕೆ ತಂದಿದೆ. ಈ ವರ್ತನೆ ಖಂಡನೀಯ.” ಎಂದು ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.