ಹುಬ್ಬಳ್ಳಿ:ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆಗೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧನ ಮಾಡುವಲ್ಲಿ ಎಪಿಎಂಸಿ ನವನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಿಯಕರನಿಂದ ಗಂಡನನ್ನೇ ಕೊಲೆ ಮಾಡಿಸಿ, ಬಳಿಕ ಇದು ಅತೀಯಾಗಿ ಸಾರಾಯಿ ಕುಡಿತದಿಂದ, ಅಥವಾ ಯಾವುದೋ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ ಎಂಬಂತೆ ಬಿಂಬಿಸಿದ್ದ ಹೆಂಡತಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಮೂಲಕ ಮುಚ್ಚಿ ಹೋಗಬಹುದಾಗಿದ್ದ ಪ್ರಕರಣವೊಂದನ್ನು ಪೊಲೀಸರು ಭೇದಿಸಿ ಬಯಲಿಗೆಳೆದಿದ್ದಾರೆ.
ಜ.14 ರಂದು ಧಾರವಾಡ ತಾಲೂಕಿನ ಮಾರಡಗಿ ಗ್ರಾಮದ ರಸ್ತೆಯ ಬಳಿ ಹುಬ್ಬಳ್ಳಿ ಗೋಕುಲ್ ರಸ್ತೆಯ ಬಂಜಾರ ಕಾಲೋನಿಯ ನಿವಾಸಿಯಾದ ಚಂದ್ರಶೇಖರ ಲಮಾಣಿ (47) ಎಂಬ ವ್ಯಕ್ತಿಯೇ ಶವವಾಗಿ ಪತ್ತೆಯಾಗಿದ್ದ, ಈ ಕುರಿತಂತೆ ಮೃತ ಪತ್ನಿಯಾದ ಮಂಜುಳಾ ದೂರು ನೀಡಿದ್ದಳು. ಆದರೆ ಇದು ಪಕ್ಕಾ ಮರ್ಡರ್ ಅಂತ ಮೃತನ ಸಹೋದರ ಸುರೇಶ್ ಲಮಾಣಿ ಕೂಡ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದಾಗ ಮೃತ ಚಂದ್ರಶೇಖರ ಪತ್ನಿಯೇ ಪ್ರಿಯಕರನ ಜೊತೆಗೆ ಸೇರಿ ಈ ಕೃತ್ಯ ಎಸೆಗಿದ್ದಾಳೆಂದು ಪೊಲೀಸರ ಕಾರ್ಯಾಚರಣೆಯಿಂದ ತಿಳಿದುಬಂದಿದೆ.
ಆರೋಪಿತಳಾದ ಮಂಜುಳಾ ತನ್ನ ಪತಿ ಕುಡಿತಕ್ಕೆ ದಾಸನಾಗಿದ್ದ ದಿನನಿತ್ಯ ಬಂದು ಜಗಳವಾಡುತ್ತಿದ್ದ, ಅಲ್ಲದೇ ನನ್ನ ಹಾಗೂ ತನ್ನ ಪ್ರಿಯಕರ ರಿಯಾಜ್ ನ ಅಕ್ರಮ ಸಂಬಂಧ ತನ್ನ ಪತಿಗೆ ಗೊತ್ತಾಗಿ ತನ್ನನ್ನು ಮನೆ ಬಿಟ್ಟು ಹೊರ ಹಾಕಿದ್ದ, ಇದೇ ವಿಚಾರವಾಗಿ ರಿಯಾಜ್ ಗೆ ತನ್ನ ಪತಿಯನ್ನು ಕೊಲೆ ಮಾಡಲು ಹೇಳಿದ್ದೆ. ಅದೇ ರೀತಿ ರಿಯಾಜ್ ತನ್ನ ಪತಿಯನ್ನು ಕೊಲೆ ಮಾಡಿದ್ದಾನೆ ಎಂದು ತಪ್ಪು ಒಪ್ಪಿಕೊಂಡಿದ್ದಾಳೆ.
ಮೃತ ವ್ಯಕ್ತಿಯ ಪತ್ನಿ ಹಾಗೂ ಪ್ರೀಯಕರ ರಿಯಾಜ್ ನನ್ನು ಪೊಲೀಸರು ಬಂಧನ ಮಾಡಿದ್ದು, ಈ ಕುರಿತಂತೆ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಹಚ್ಚುವಲ್ಲಿ ಯಶಸ್ವಿಗೊಂಡ ಎಸಿಪಿ ಶಿವಪ್ರಕಾಶ ಆರ್. ನಾಯ್ಕ, ಬಿ.ಎಸ್ ಮಂಟೂರ ಪೊಲೀಸ ಇನ್ಸಪೆಕ್ಟರ ಹಾಗೂ ಬಿ.ಎನ್ ಸಾತನ್ನವರ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಆರ್.ಟಿ. ರಾಮದುರ್ಗ, ಆರ್.ಆರ್.ಹೊಸಮನಿ, ಪಿ.ಎಸ್.ಚಲವಾದಿ, ಎಮ್.ಎಮ್.ತಳಗೇರಿ, ಜಗದೀಶ ಎಸ್.ಹಟ್ಟಿ, ಕೆ.ಬಿ.ಬೀರನೂರ, ಸಿ.ವೈ.ಬಕ್ಕಸದ ಇವರುಗಳ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರಾದ ಶ್ರೀಮತಿ ರೇಣುಕಾ ಸುಕುಮಾರ ಅವರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ.