ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಬೆಳೆದಂತೆ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲ್ಲೇ ಇದೆ. ಅದರಂತೆ ನಾವು ವಾಸಿಸುವ ಸ್ಥಳದಲ್ಲಿಯೂ ಪೊಲೀಸರು ಬೀಟ್ ಗೆ ಬಂದರೇ ಕಳ್ಳರ ಹಾವಳಿ ತಪ್ಪಿಸಲು ಸಾಧ್ಯ ಎಂದು ನಿಮ್ಮ \’ಕರ್ನಾಟಕ ಪಬ್ಲಿಕ್ ವಾಯ್ಸ್\’ ವಾಹಿನಿ ಮೂಲಕ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೌದು… ಹುಬ್ಬಳ್ಳಿ ಆನಂದನಗರದ ಘೊಡ್ಕೆ ಪ್ಲಾಟ್, ಬ್ಯಾಹಟ್ಟಿ ಪ್ಲಾಟ್, ಮೇಘರಾಜ ನಗರಗಳಲ್ಲಿ ಕಳ್ಳರ ಹಾವಳಿಯಿಂದಾಗಿ ಇಲ್ಲಿನ ಸಾರ್ವಜನಿಕರು ಹೈರಾಣಾಗಿದ್ದು, ಮೊನ್ನೆ ನಡೆದ ಕಳ್ಳತನ ಪ್ರಕರಣ ಸೇರಿದಂತೆ ಕಳ್ಳರ ಕೃತ್ಯಕ್ಕೆ ಬೇಸತ್ತು ಹೋಗಿದ್ದಾರೆ.
ಕಳ್ಳತನ ಪ್ರಕರಣವಾದರೂ ಕೂಡಾ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಸಾರ್ವಜನಿಕರು, ತಿಂಗಳುಗಟ್ಟಲೆ ದುಡಿದ ಹಣವನ್ನು ಕಳ್ಳರು ದೋಚಿ ಹೋದರೇ ಮಕ್ಕಳ ಶಾಲೆ ಫೀ ಹಾಗೂ ಜೀವನ ನಡೆಸೋದು ಹೇಗೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ವಾರ್ಡಿನ ಕಾರ್ಪೊರೇಟರಿಗೂ ಕೂಡ ಹಲವಾರು ಬಾರಿ ಸಿಸಿಟಿವಿ ಅಳವಡಿಸುವ ಕುರಿತು ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸರು ನಿತ್ಯ ಬೀಟ್ ಗೆ ತೆರಳಿದರೇ ಕಳ್ಳರಲ್ಲಿ ಭೀತಿ ಉಂಟಾಗುತ್ತದೆ. ಈ ಹಿನ್ನಲೆಯಲ್ಲಿ ಕಳ್ಳತನ ಪ್ರಕರಣಗಳನ್ನು ತಡೆಯಬಹುದು ಹಾಗೂ ಮಹಿಳೆಯರು ನಿರ್ಭೀತಿಯಿಂದ ವಾಸಿಸಲು ಅನುಕೂಲವಾಗುತ್ತದೆ ಎಂದಿದ್ದಾರೆ.
ಒಟ್ಟಿನಲ್ಲಿ ಆನಂದನಗರದ ನಿವಾಸಿಗಳು ನಿರ್ಭೀತಿಯಿಂದ ವಾಸಿಸಬೇಕಾದರೇ ಪೊಲೀಸರು ಕಳ್ಳರ ಕೃತ್ಯಕ್ಕೆ ಕತ್ತರಿ ಹಾಕಿ, ನಿತ್ಯ ಬೀಟ್ ಗೆ ತೆರಳಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ ಎಂಬುದೇ ಇಲ್ಲಿನ ಸಾರ್ವಜನಿಕರ ಆಗ್ರಹವಾಗಿದೆ.