ಹುಬ್ಬಳ್ಳಿ: ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸಬಹುದೆಂದು ನಂಬಿಸಿ, ಜಿಲ್ಲೆಯ ಹಲವರಿಂದ ಹಣ ಪಡೆದುಕೊಂಡು ಕೋಟ್ಯಂತರ ರೂ. ವಂಚಿಸಿ ಎಸ್ಕೇಪ್ ಆಗಿದ್ದ ವಂಚಕನನ್ನು ಶಹರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋನಿ ರಾಹುಲ್ ಎಂಬಾತನೆ ಬಂಧಿತ ಆರೋಪಿ. ಈತ ಇಲ್ಲಿನ ಮಹಿಳಾ ಕಾಲೇಜ್ ರಸ್ತೆಯ ಗ್ಯಾಲಕ್ಸಿ ಮಾಲ್ನಲ್ಲಿ \”ಎನ್ಎಸ್ ಮ್ಯಾನೇಜ್ಮೆಂಟ್\” ಎಂಬ ಹೆಸರಿನ ಕಚೇರಿ ತೆರೆದು, ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ.15, 20ರಷ್ಟು ಲಾಂಭಾಶ ಕೊಡುವುದಾಗಿ ಮೊಬೈಲ್ನಲ್ಲಿ ಜಾಹೀರಾತು ಕೊಟ್ಟಿದ್ದಾನೆ. ಇದನ್ನು ನಂಬಿದ ಹಲವರು ನಗದು ರೂಪದಲ್ಲಿ ಹಾಗೂ ಆನ್ಲೈನ್ ಮೂಲಕ ಆತ ನೀಡಿದ್ದ ವಿವಿಧ ಖಾತೆಗಳಿಗೆ ಹಣ ಜಮಾ ಮಾಡಿ ಹೂಡಿಕೆ ಮಾಡಿದ್ದಾರೆ.
ಅಲ್ಲದೆ ಓರ್ವರ ಹೆಸರಿನಲ್ಲಿದ್ದ ಕಾರ್ನ್ನು ಇಸಿದುಕೊಂಡು ಬೇರೆಯವರ ಹೆಸರಿನಲ್ಲಿ ನೋಂದಾಯಿಸಿಕೊಂಡು ಹೂಡಿಕೆದಾರರಿಗೆ ಹಣ ಮತ್ತು ಲಾಭಾಂಶ ನೀಡದೆ ಪರಾರಿಯಾಗಿದ್ದಾನೆಂದು ಆರೋಪಿಸಿ ವಿದ್ಯಾರ್ಥಿ ಸುದೀಪ ಎಂಬುವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಂಚಕನ ಪತ್ತೆಗೆ ಜಾಲ ಬೀಸಿದ್ದರು.
ಖಚಿತ ಮಾಹಿತಿ ಮೇರೆಗೆ ಠಾಣೆಯ ಇನ್ಸ್ಪೆಕ್ಟರ್ ಮೊಹಮ್ಮದ್ ರಫೀಕ ತಹಶೀಲ್ದಾರ್ ನೇತೃತ್ವದಲ್ಲಿ ಸಿಬ್ಬಂದಿ ರವಿರಾಜ ಕೆಂದೂರ, ಜಗದೀಶ ಮ್ಯಾಗಿನಮನಿ, ಕಲ್ಲನಗೌಡರ, ರಾಮರಾವ ರಾಥೋಡ ಅವರನ್ನೊಳಗೊಂಡ ತಂಡ ತಲೆಮರೆಸಿಕೊಂಡಿದ್ದ ಸೋನಿ ರಾಹುಲ್ನನ್ನು ಗುಜರಾತ್ನಲ್ಲಿ ಕಾರು ಸಮೇತ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.