ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪುಡಿ ರೌಡಿಗಳು ಬಾಲಬಿಚ್ಚುತ್ತಿದ್ದು, ಕ್ಷುಲ್ಲಕ ವಿಚಾರಗಳಿಗೆ ಕೊಲೆ ಮಾಡುವ ಹಂತಕ್ಕೆ ಹೋಗುತ್ತಿದ್ದಾರೆ. ಇದೀಗ ದಾವೂದ್ ಮೇಲೆ ನಡೆದ ಕೊಲೆ ಅಟ್ಯಾಕ್ ಮಾಸುವ ಮುನ್ನವೇ ಅದೇ ಮಾದರಿಯ ಅಟ್ಯಾಕ್\’ವೊಂದು ಹುಬ್ಬಳ್ಳಿಯಲ್ಲಿ ನಡೆದಿದ್ದು, ಜನರು ಭಯಪಡುವಂತಾಗಿದೆ.
ಹೌದು, ಮಾ.7 ರಂದು ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಂಜುಮನ್ ಸಂಸ್ಥೆಯ ಸದಸ್ಯ ದಾವೂದ್ ನದಾಫ್ ಮೇಲೆ ಕಣ್ಣಿಗೆ ಖಾರ ಎರಚಿ ತಲ್ವಾರ್ ಮೂಲಕ ಕೊಲೆಯತ್ನ ನಡೆಸಲಾಗಿತ್ತು. ಅದೇ ತೆರನಾದ ಘಟನೆ ಹಳೇಹುಬ್ಬಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಟಿಪ್ಪುನಗರದ ನಿವಾಸಿ ಸಿದ್ದರಾಮೇಶ್ವರ ಬಳ್ಳಾರಿ (24) ಎಂಬಾತ ಸಾವು ಬದುಕಿನ ಮಧ್ಯೆ ಕಿಮ್ಸ್\’ನಲ್ಲಿ ಹೋರಾಟ ಮಾಡುವಂತಾಗಿದೆ.
ವೃತ್ತಿಯಲ್ಲಿ ಆಟೋ ಡ್ರೈವರ್\’ನಾಗಿರುವ ಸಿದ್ದರಾಮೇಶ್ವರ ಬಳ್ಳಾರಿ ತಾನಾಯಿತು, ತನ್ನ ಕೆಲಸವಾಯಿತು ಎಂದು ಇದ್ದವನು. ಕಳೆದ ಮಾ.15 ರಂದು ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಿದ್ದಾನೆ. ಆಗ ರಾತ್ರಿ ಯಾರೋ ಮೊಬೈಲ್\’ಗೆ ಕರೆಮಾಡಿ ಕರೆದಿದ್ದು, ಈ ಕಾರಣ ಮನೆಯಿಂದ ಸಿದ್ದರಾಮೇಶ್ವರ ಹಳೇಹುಬ್ಬಳ್ಳಿಯ ಸಂತೋಷನಗರದ ಪರಸು ಹಿಟ್ಟಿನ ಗಿರಣಿ ಹತ್ತಿರ ಬಂದಿದ್ದಾನೆ. ಆಗ ಯಾರೋ 3-4 ಜನರ ಗುಂಪೊಂದು ಏಕಾಏಕಿ ಕಣ್ಣಿಗೆ ಖಾರದ ಪುಡಿ ಎರಚಿ, ಕಟ್ಟಿಗೆ ಹಾಗೂ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಪರಿಣಾಮ ಸಿದ್ದರಾಮೇಶ್ವರ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಸಿದ್ದರಾಮೇಶ್ವರ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ಈ ನಡುವೆ ಸಿದ್ದರಾಮೇಶ್ವರ ಮೇಲೆ ನಡೆದಿರುವ ಕೊಲೆಯತ್ನಕ್ಕೆ ನಿಖರ ಮಾಹಿತಿ ಗೊತ್ತಾಗಿಲ್ಲ. ಈ ಬಗ್ಗೆ ಹಳೇಹುಬ್ಬಳ್ಳಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಕೆಲವು ಆರೋಪಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ತಮ್ಮ ಮಗನ ಸ್ಥಿತಿ ಕಂಡು ಸಿದ್ದರಾಮೇಶ್ವರ ತಾಯಿ ಕಣ್ಣೀರು ಹಾಕುತ್ತಿದ್ದು, ನೇಕಾರನಗರದಲ್ಲಿ ಹೇಳೋರು ಕೇಳೋರು ಯಾರು ಇಲ್ಲ, ಇದೀಗ ಮೂರು ಹೆಣಾ ನೇಕಾರದಲ್ಲಿ ಬಿದ್ದಿವೆ. ಕೇಳೋರು ಯಾರ ಇದೀಗ, ಬಡವರು ಬದುಕುವುದು ಹೇಗೆ? ಇದು ನೇಕಾರ ನಗರವೋ, ಕೊಲೆಗಡುಕ ನೇಕಾರನಗರವೋ? ಹೀಗಾದರೇ ಬಡವರು ಬದಕೋದೆ ಕಷ್ಟವಾಗಿದೆ. ನಮ್ಮ ಮಗನ ಪರಿಸ್ಥಿತಿಗೆ ನಮಗೆ ನ್ಯಾಯ ಸಿಗಬೇಕೆಂದು ಗಾಯಗೊಂಡಿರುವ ಸಿದ್ದರಾಮೇಶ್ವರನ ತಾಯಿ ಲಕ್ಷ್ಮೀ ಬಳ್ಳಾರಿ ಒತ್ತಾಯಿಸಿದ್ದಾರೆ.
ನಮ್ಮ ತಮ್ಮ ನೇಕಾರನಗರ ಆಟೋ ಸ್ಟ್ಯಾಂಡ್ ಕಡೆಗೆ ನಿಂತಿದ್ದ ಅಂತ ರೀ, ಅವನಿಗೆ ಸಂಜು ಬ್ರದರ್ ಅನ್ನುವವ ಫೋನ್ ಮಾಡಿ ಕರಿಸ್ಯಾರ ಅಂತ ರೀ, ಆಗ ಹೋದಾಗ ಕಣ್ಣಿಗೆ ಖಾರದ ಪುಡಿ ಉಗ್ಗಿ, ಹಾಕಿ ಸ್ಟಿಕ್\’ನಿಂದ ಹೊಡದಾರ ರೀ, ನಮ್ಮ ತಮ್ಮ ದುಷ್ಮನಗಿರಿ ಮಾಡುವವ ಅಲ್ಲ ರೀ, ದುಡಕೊಂಡು ತಿನ್ನುವವ ಅದಾನ ರೀ, ಅಮಾಯಕ ಹುಡುಗ ಅದಾನ ರೀ, ಈ ರೀತಿ ಅನ್ಯಾಯ ಮಾಡಿದ್ರೆ ಹೇಗೆ ರೀ? ಇದು ಒಂದ ಅಲ್ಲ ರೀ, ಹಗಲಿ ಮುಗಲಿ ಬರೀ ಇವ ಆಗಾಕತ್ತಾವ ರೀ, ಹೀಗೆ ಆದರೆ ಹೇಗೆ ರೀ? ಜೀವನಾ ಮಾಡೋದ ಆದ್ರು ಹೇಗೆ ರೀ? ಎಂದು ವೆಂಕಟೇಶ ಬಳ್ಳಾರಿ ತಮ್ಮ ಅಳಲು ತೋಡಿಕೊಳ್ಳತ್ತಾರೆ.
ನಮ್ಮ ಅಳಿಯ ಸಿದ್ದರಾಮ ಬಂಗಾರದಂತವ ರೀ, ಮಗಳ ಗರ್ಭಿಣಿ ಅದಾಳ ರೀ, ನಮಗ ದುಡಿದು ಕೊಡುವವರು ಯಾರಿಲ್ಲ ರೀ, ನಮ್ಮ ಮನಿ ಹೇಗೆ ನಡಿಬೇಕು ರೀ, ಫೋನಿನ್ಯಾಗ್ ಮಾತನಾಡಿಕೊಂಡು ಹೋದಾವ ಮನಿಗೆ ಬರಲೇ ಇಲ್ಲ ರೀ, ನಮಗ ಪೋಲಿಸರು ನ್ಯಾಯ ಒದಗಿಸಬೇಕ ರೀ ಎಂದು ಸಿದ್ದರಾಮೇಶ್ವರನ ಅತ್ತೆ ಲಕ್ಷ್ಮೀ ಹೇಳತ್ತಾರೆ.