ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ನಾಮಪತ್ರದಲ್ಲಿ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಜೋಶಿ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ 21,09,60,953 ರೂ. ಆಗಿದೆ. ಕಳೆದ 5 ವರ್ಷದಲ್ಲಿ ಇವರ ಕುಟುಂಬದ ಆಸ್ತಿಯಲ್ಲಿ 7 ಕೋಟಿ ರೂ. ಹೆಚ್ಚಳವಾಗಿದೆ.
2019ರ ಚುನಾವಣೆಯಲ್ಲಿ ಜೋಶಿ ಕುಟುಂಬದ ಒಟ್ಟು ಆಸ್ತಿ 14.71 ಕೋಟಿ ಇತ್ತು. ಜೋಶಿ ವೈಯಕ್ತಿಕ ಆಸ್ತಿಯಲ್ಲಿಯೂ ಏರಿಕೆಯಾಗಿದ್ದು, ಅವರ ವೈಯ್ಯಕ್ತಿಕ ಆಸ್ತಿ ಮೌಲ್ಯ 13,97,29,450 ರೂ. ಇದೆ. ಕಳೆದ ಚುನಾವಣೆಯಲ್ಲಿ ಜೋಶಿ ಒಟ್ಟು ಆಸ್ತಿ ಮೌಲ್ಯ 11.13 ಕೋಟಿ ಇತ್ತು. ಆಸ್ತಿ ಜೊತೆಗೆ ಇವರ ಸಾಲದಲ್ಲಿ ಕೂಡ ಏರಿಕೆ ಕಂಡುಬಂದಿದೆ. ಕಳೆದ ಚುನಾವಣೆಯಲ್ಲಿ 5.17 ಕೋಟಿ ರೂ.ಸಾಲ ಹೊಂದಿದ್ದ ಜೋಶಿ, 6.63 ಕೋಟಿ ಸಾಲ ಹೊಂದಿದ್ದಾರೆ.
ಇನ್ನು ಪ್ರಲ್ಹಾದ್ ಜೋಶಿ ಅವರ ವೈಯಕ್ತಿಕ ಚರಾಸ್ತಿ 2.72 ಕೋಟಿ ರೂ. ಇದ್ದು, ಒಟ್ಟು ಸ್ಥಿರಾಸ್ತಿ 11.24 ಕೋಟಿ ರೂ. ಇದೆ. ಪತ್ನಿ ಜ್ಯೋತಿ ಚರಾಸ್ತಿ 5.93 ಕೋಟಿ, ಸ್ಥಿರಾಸ್ತಿ 86.39 ಲಕ್ಷ ಮೌಲ್ಯವಾಗಿದೆ. ಪತ್ನಿ ಜ್ಯೋತಿ ಹೆಸರಿನಲ್ಲಿ 1.37 ಕೋಟಿ ಸಾಲ ಇದ್ದು, ಜೋಶಿ ಬಳಿ 184 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ ಆಭರಣ, ಪತ್ನಿ ಬಳಿ 500 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿ ಇದೆ. ಪುತ್ರಿ ಅನನ್ಯಾ ಬಳಿ 250 ಗ್ರಾಂ ಚಿನ್ನ ಇದ್ದು, ಜೋಶಿ ಕುಟುಂಬದ ಬಳಿ ಯಾವುದೇ ಸ್ವಂತ ವಾಹನ ಇಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.