ಹುಬ್ಬಳ್ಳಿ: ಅಪಘಾತದಲ್ಲಿ ಗಾಯಗೊಂಡ ಮಗನನ್ನು ನೋಡಲು ಬಂದ ತಂದೆ ತಾಯಿ ಹಾಗು ತಮ್ಮನ ಮೇಲೆ ಮಗನ ಸ್ನೇಹಿತರು ಸೇರಿಕೊಂಡು ಹಲ್ಲೆ ಮಾಡಿರುವ ಘಟನೆ ಕಿಮ್ಸ್ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಬಳಿ ನಡೆದಿದೆ.
ಮಹಮ್ಮದಸಾಬ್, ಸಾಹೇರಾಬಾನು ಹಾಗು ನಯಿಮ ನದಾಫ್ ಹಲ್ಲೆಗೆ ಒಳಗಾದವರು. ಟಿಪ್ಪು ಸುಲ್ತಾನ್ ನಾಲ್ಕು ವರ್ಷಗಳ ಹಿಂದೆ ಮನೆಯಲ್ಲಿ ಜಗಳ ಮಾಡಿ ಮನೆ ಬಿಟ್ಟು ಧಾರವಾಡದ ಅವರ ಅಜ್ಜಿ ಮನೆಯಲ್ಲಿದ್ದನೆಂದು ಹೇಳಿಕೊಂಡು ತನ್ನ ಗೆಳಯನ ಮನೆಯಲ್ಲಿದ್ದನಂತೆ. ನಿನ್ನೆ ದಿವಸ ರಸ್ತೆ ಅಪಘಾತದಲ್ಲಿ ಗಾಯಗೊಂಡ ಟಿಪ್ಪು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಮಗನನ್ನು ನೋಡಲು ಪೋಷಕರು ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಈ ಸಮಯದಲ್ಲಿ ಅವರನ್ನು ಅಡ್ಡಗಟ್ಟಿ, ನೀವೆಕೆ ಇಲ್ಲಿಗೆ ಬಂದಿದ್ದೀರಿ ಅಂತ ಆತನ ಸ್ನೇಹಿತರು ಅವರ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.
ಇನ್ನು ಟಿಪ್ಪು ಸುಲ್ತಾನ್ ಗೆಳೆಯ ಜಹೀರ್ ಅಬ್ಬಾಸ್ ಅತ್ತಾರ ಹಾಗೂ ತಾಯಿ ರೇಹನಾ ಖಾಜಾ ಅತ್ತಾರ ಇವರುಗಳು ಆತನನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಕೆಲಸಕ್ಕೆ ಕಳಸುತ್ತಿದ್ದರಂತೆ. ಆತ ನಿಮ್ಮ ಮಗಾ ಅಲ್ಲಾ ನಮ್ಮ ಜೊತೆ ಇದ್ದಾನೆ. ಇಲ್ಲೆ ಏಕೆ ಬಂದಿದ್ದೀರಿ ಅಂತ ರೌಡಿಗಳನ್ನು ಕರೆಯಿಸಿ ಅವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಟಿಪ್ಪು ಸುಲ್ತಾನ್ ತಂದೆ, ತಾಯಿ ಹಾಗೂ ತಮ್ಮ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ಹಲ್ಲೆಗೊಳಗಾದವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.