ಹುಬ್ಬಳ್ಳಿ: ಯಾವುದೇ ಕೆಲಸವಿಲ್ಲದೇ, ಹೊಟ್ಟೆ ಪಾಡಿಗಾಗಿ ಅಲೆಯುತ್ತಿದ್ದ ಬುದ್ದಿಮಾಂದ್ಯ ಯುವಕನೋರ್ವನನ್ನು ಹು-ಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರ ಸೂಚನೆ ಮೇರೆಗೆ ಕರೆತಂದು ಆತನ ಜೀವನಕ್ಕೆ ಆರಕ್ಷಕರು ಬೆಳಕಾಗಿದ್ದು, ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸೋಮವಾರದಂದು ಸಂಜೆ ನೂತನ ಕಮೀಷನರ್ ಅವರು ತಮ್ಮ ಬೀಟ್ ಕರ್ತವ್ಯದ ಸಂದರ್ಭದಲ್ಲಿ ನಗರದ ಗಣೇಶ್ ಪೇಟ್ ಬಳಿಯ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಓಪಿ ಬಳಿಯಲ್ಲಿ ಸುಮಾರು 25 ವರ್ಷದ ವಿನಾಯಕ ಎಂಬ ಬುದ್ಧಿಮಾಂದ್ಯ ಹೊಂದಿರುವ ಯುವಕನನ್ನು ನೋಡಿ ಆತನನ್ನು ಕರೆ ತಂದು ಆತನಿಗೆ ಆಸರೆಯ ಬೆಳಕಾಗಿದ್ದಾರೆ.
ಕಮೀಷನರ್ ಅವರ ಸೂಚನೆ ಮೇರೆಗೆ ಶಹರ ಠಾಣೆಯ ಇನ್ಸ್ಪೆಕ್ಟರ್ ಮೊಹಮ್ಮದ್ ರಫೀಕ್ ತಹಶಿಲ್ದಾರ ಹಾಗೂ ದಕ್ಷಿಣ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಮರಳುಸಿದ್ದಪ್ಪ ಅವರ ನೇತೃತ್ವದಲ್ಲಿ ಆತನಿಗೆ ಕಟ್ಟಿಂಗ್ ಮಾಡಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡುವುದಲ್ಲದೆ ಆತನ ಜೀವನಕ್ಕಾಗಿ ಓಪಿ ನೋಡಿಕೊಂಡು ಸ್ವಚ್ಛ ಮಾಡಿಕೊಂಡು ಇರುವ ವ್ಯವಸ್ಥೆಯನ್ನು ಆರಕ್ಷಕರು ಮಾಡಿದಲ್ಲದೆ, ಮಾನವೀಯ ದೃಷ್ಟಿಯಿಂದ ಖರ್ಚು ವೆಚ್ಚವನ್ನು ನೀಡಲಾಗುವುದು ಎಂದು ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ. ತಹಶಿಲ್ದಾರ ಅವರು ಮಾಹಿತಿ ನೀಡಿದ್ದಾರೆ.
ಈ ವೇಳೆ ಹು-ಧಾ ದಕ್ಷಿಣ ಸಂಚಾರಿ ಠಾಣೆಯ ಪಿಎಸ್ಐ ನದಾಫ್, ಶಹರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.