ಹುಬ್ಬಳ್ಳಿ: ನಗರದ ದಾಜೀಬಾನ್ ಪೇಟೆಯಲ್ಲಿರುವ ಗ್ಯಾಸ್ ಏಜನ್ಸಿಯೊಂದರಲ್ಲಿ 5.37 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೈಲಾಸ ಮೋಹನರಾಮ ಬಿಷ್ಟೋಯಿ (32), ಗಂಗಾವಿಷ್ಣು ದೆನ್ನಾರಾಮ ಬಿಷ್ಟೋಯಿ (25) ಎಂಬಾತರೇ ಬಂಧಿತ ಆರೋಪಿಗಳಾಗಿದ್ದು, ಕಳ್ಳತನವಾಗಿದ್ದ 5,37,900 ರೂ. ನಗದು ಹಣವನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜುಲೈ 13 ರಂದು 5,37,900 ರೂ. ನಗದು ಕಳ್ಳತನವಾಗಿರುವ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಪೊಲೀಸರು, ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಗ್ಯಾಸ್ ಏಜೆನ್ಸಿಯಲ್ಲಿಯೇ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಸಿಪಿ ಶಿವಪ್ರಕಾಶ್ ನಾಯ್ಕ್ ಅವರ ನೇತೃತ್ವದಲ್ಲಿ ಉಪನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಮ್.ಎಸ್.ಹೂಗಾರ, ಪಿಎಸ್ಐ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿಗಳಾದ, ಹೆಚ್ ಎಂ ಗುಲ್ಲೇಶ್, ನಾಗರಾಜ್ ಗುಡಿಮನಿ, ರೆನಪ್ಪ, ಶ್ರೀನಿವಾಸ್, ಪ್ರಕಾಶ್, ದಾನೆಷ್, ಅರುಣ್, ಮಂಜು ಹಾಗೂ ತರುಣ್ ಇವರುಗಳ ಕಾರ್ಯವೈಖರಿಯನ್ನು ಹು-ಧಾ ಪೊಲೀಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.