ಹುಬ್ಬಳ್ಳಿ: ವ್ಯಕ್ತಿಯೋರ್ವನಿಗೆ ಥಳಿಸಿ ನಗದು ಹಾಗೂ ಮೊಬೈಲ್ ಕಿತ್ತುಕೊಂಡು ದರೋಡೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಹೊರವಲಯದ ಕುಸುಗಲ್ ರಿಂಗ್ ರೋಡ್ ಬಳಿಯಲ್ಲಿ ಹೆಬ್ಸೂರ್ ಮೂಲದ ಬಾಬಾಸಾಹೇಬ ಜಕಾತಿ ಎಂಬರಿಂದ 5500 ರೂ. ಮೊಬೈಲ್ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳಾದ ಹಾನಗಲ್ ರಾಜೀವ್ ನಗರದ ವಿನಯ ರಾಮಪ್ಪ ಕಟ್ಟಿಮನಿ (24), ಕುಂದಗೋಳ ತಾಲೂಕಿನ ಹೊಸಹಂಚಿನಾಳ ಗ್ರಾಮದ ಜಗದೀಶ್ ಕೋಟೆಪ್ಪ ಭಂಡಿವಾಡ (21), ಹಾನಗಲ್ ವಿವೇಕಾನಂದನಗರದ ಗಣೇಶ್ ನಾಗರಾಜ ಹೊಂಬರಡಿ (21) ಇವರಿಂದ ಟಿವಿಎಸ್ ಬೈಕ್, ಮೊಬೈಲ್ ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರಗೇಶ್ ಚನ್ನಣ್ಣನವರ್, ಪಿಎಸ್ಐ ಸಚಿನ್ ಆಲಮೇಲಕರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಪ್ರಕರಣ ಭೇದಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಬಹುಮಾನ ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.