ಯಾವುದೇ ಒಂದು ಸರ್ಕಾರಿ ಇಲಾಖೆಯಲ್ಲಿ ಎರಡು ವರ್ಷಕ್ಕಿಂತ ಅಧಿಕ ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿರೋ ಅಧಿಕಾರಿಗಳನ್ನ ಬೇರೆಡೆ ವರ್ಗಾವಣೆ ಮಾಡಿ ಕಾರ್ಯಸ್ಥಳ ಬದಲಾವಣೆ ಮಾಡಬೇಕು ಅನ್ನೋದು ಸರ್ಕಾರದ ಆದೇಶವೇ ಇದೆ. ಆದ್ರೆ ರಾಜ್ಯದ ಆ ಅತೀ ದೊಡ್ಡ ಇಲಾಖೆಯಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿರುವ ಅದೆಷ್ಟೋ ಸಿಬ್ಬಂಧಿಗಳನ್ನ ಕಾರ್ಯಸ್ಥಳ ಬದಲಾವಣೆ ಮಾಡೋಕೆ ಹಿರಿಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಯಾವುದು ಆ ಇಲಾಖೆ ಅಂತೀರಾ ಹಾಗಾದ್ರೆ ಈ ಕುರಿತು ಇಲ್ಲಿದೆ ಒಂದು ವರದಿ.
ಹೌದು ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಐದು ವರ್ಷಗಳ ಸೇವೆಯನ್ನು ಒಂದೇ ಸ್ಥಳದಲ್ಲಿ ಪೂರೈಸಿರುವ ಪಿ.ಸಿ. ಹೆಚ್.ಸಿ ಹಾಗೂ ಎ.ಎಸ್.ಐ ಅವರನ್ನು ಕೂಡಲೇ ವರ್ಗಾವಣೆ ಮಾಡಲು ಪೊಲೀಸ್ ಇಲಾಖೆ ಸೂಚಿಸಿದೆ. ಎಲ್ಲ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ, ಹೆಚ್.ಸಿ. ಎಎಸ್ಐ ಸಿಬ್ಬಂಧಿಗೆ ಕನಿಷ್ಟ ಮತ್ತು ಗರಿಷ್ಟ ಅವಧಿಯನ್ನು ನಿಗಧಿಪಡಿಸಲಾಗಿದೆ. ಆದಾಗ್ಯೂ ಹಲವಾರು ಘಟಕಗಳಲ್ಲಿ ಸಿಬ್ಬಂದಿಗಳು ಒಂದೇ ಸ್ಥಳ, ಒಂದೇ ಠಾಣೆಯಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಹಾಗೆಯೇ ವರ್ಗಾವಣೆ ನಂತರ ಪುನಃ ಅದೇ ಠಾಣೆಗಳಿಗೆ ಓಓಡಿ ಆಧಾರದ ಮೇಲೆ ಸ್ಥಳನಿಯುಕ್ತಿಗೊಳಿಸುತ್ತಿರುವುದು ಕಂಡು ಬಂದಿರುತ್ತದೆ. ಆದ್ರೆ ಕಳೆದ ಹಲವಾರು ವರ್ಷಗಳಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೆಲವು ಪೊಲೀಸ್ ಠಾಣೆಗಳಲ್ಲಿ ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿರುವ ಸಿಬ್ಬಂಧಿಗಳನ್ನ ಬೇರೆಡೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಹು-ಧಾ ಪೊಲೀಸ್ ಕಮಿಷನರ್ ಯಾಕೋ ಮನಸ್ಸು ಮಾಡುತ್ತಿಲ್ಲ ಅನ್ನೋದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವಳಿ ನಗರದ ಚುಕ್ಕಾಣಿ ಹಿಡಿದಿದ್ದೇ ತಡ. ಅವಳಿ ನಗರದಲ್ಲಿ ಬಾಲ ಬಿಚ್ಚುತ್ತಿದ್ದ ಬಹುತೇಕ ಪುಢಾರಿಗಳಿಗೆ ಮೈನಡುಕ ಶುರುವಾಗಿದೆ. ಈಗಾಗಲೇ ಅದೆಷ್ಟೋ ಪುಡಿ ರೌಡಿಗಳಿಗೆ, ರೌಡಿಶೀಟರ್ ಗಳಿಗೆ ಮೈ ಚಳಿ ಬಿಡಿಸುವ ಕಾರ್ಯಕ್ಕೆ ಮುಂದಾಗಿರುವ ಆಯುಕ್ತರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದಷ್ಟೇ ಅಲ್ದೇ ಮಾದಕ ಲೋಕದ ಕರಾಳತೆಯನ್ನ ಎಳೆಎಳೆಯಾಗಿ ಬಿಚ್ಚಿಡುವಂತೆ ಮಾಡುವ ಮೂಲಕ ಮಾದಕ ವ್ಯಸನಿಗಳಿಗೆ ಜೀವನದ ಪಾಠ ಕಲಿಸುವ ಮೂಲಕ ಪೊಲೀಸ್ ಆಯುಕ್ತರು ಒಂದೊಳ್ಳೆ ಕಾರ್ಯವನ್ನ ಮಾಡುವ ಮೂಲಕ ಅವಳಿ ನಗರದ ಸ್ವಾಸ್ತ್ಯವನ್ನ ಕಾಪಾಡುವಲ್ಲಿ ಟೊಂಕಕಟ್ಟಿ ನಿಂತಿದ್ದಾರೆ.
ಆದ್ರೆ ಸಮಾಜದಲ್ಲಿ ಒಂದೊಳ್ಳೆ ವಾತಾವರಣ ಸೃಷ್ಠಿಯಾಗಬೇಕಾದ್ರೆ ಅದರ ಅಂತರಾಳವನ್ನ ಶುದ್ದಿ ಮಾಡುವ ಕಾರ್ಯ ಮಾಡಬೇಕಿರುವುದು ಅತ್ಯವಶ್ಯ. ಹೀಗೆ ದಿನನಿತ್ಯ ವ್ಯವಸ್ಥೆಯ ಆಂತರಿಕವಲಯದಲ್ಲಿ. ಅಂದ್ರೆ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿ ತಮ್ಮ ಕಾರ್ಯಸ್ಥಳದಲ್ಲಿ ಹಲವು ಚಟುವಟಿಕೆಗಳಿಗೆ ಪ್ರಭಾವ ಬೀರುವ ಕೆಲಸವನ್ನ ಮಾಡುತ್ತಿರೋ ಸಿಬ್ಬಂಧಿಗಳನ್ನ ಅವರ ಕಾರ್ಯಸ್ಥಳದಿಂದ ಕೊಂಚ ಬದಲಾವಣೆ ಮಾಡಿದಲ್ಲಿ ಆಯುಕ್ತರ ದೇಯೋದ್ದೇಶಗಳು ಮತ್ತಷ್ಟು ಸುಗಮವಾಗಿ ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನೆರವಾಗಲಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ನಿಟ್ಟಿನಲ್ಲಿ ಕಳೆದ ತಿಂಗಳು ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಸೂಚನೆಯನ್ವಯ ತಮ್ಮ ಘಟಕಗಳಲ್ಲಿ ಒಂದೇ ಸ್ಥಳ ಅಥವಾ ಒಂದೇ ಠಾಣೆಗಳಲ್ಲಿ 5 ವರ್ಷ ಸೇವೆ ಸಲ್ಲಿಸಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯವರೆಗಿನ ಅಧಿಕಾರಿ ಸಿಬ್ಬಂದಿಗಳನ್ನು ಕೂಡಲೇ ಬೇರೆ ಠಾಣೆ ಸ್ಥಳಗಳಿಗೆ ಬದಲಾವಣೆ ಮಾಡಲು ಸೂಚಿಸಲಾಗಿದ್ದು ಅಂತಹ ಸಿಬ್ಬಂಧಿಗಳನ್ನ ಬದಲಾವಣೆ ಮಾಡಿ ಪೊಲೀಸ್ ಆಯುಕ್ತರಿಗೆ ಅವಳಿ ನಗರದಲ್ಲಿ ಇನ್ನಷ್ಟು ರೀತಿಯ ಉತ್ತಮ ಕೆಲಸಗಳಿಗೆ ಮತ್ತಷ್ಟು ಬೂಸ್ಟ್ ಸಿಗಲಿ ಅನ್ನೋದೇ ಜನಸಾಮಾನ್ಯರ ಆಶಯವಾಗಿದೆ.