ಹುಬ್ಬಳ್ಳಿ: ವ್ಯಕ್ತಿಗಳಿಬ್ಬರ ನಡುವೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಜಗಳ ನಡೆದು ಓರ್ವ ಗಾಯಗೊಂಡಿರುವ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ರಾಹಂ ಪರಮಾಲ್ ಗಾಯಗೊಂಡ ವ್ಯಕ್ತಿಯಾಗಿದ್ದು, ವೆಂಕಟೇಶ ರೆಡ್ಡಿ ಎಂಬಾತ ಹಲ್ಲೆ ಮಾಡಿದವನಾಗಿದ್ದಾನೆ. ಮಂಟೂರ ರಸ್ತೆಯಲ್ಲಿ ಅಬ್ರಾಹಂ ಹಾಗೂ ವೆಂಕಟೇಶ ನಡುವೆ ಹಳೆಯ ವೈಷಮ್ಯದ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದ್ದು, ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ವೆಂಕಟೇಶ ಅಬ್ರಾಹಂ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಅಬ್ರಾಹಂ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಸದ್ಯ ವೈದ್ಯರ ಸಲಹೆ ಪಡೆದು ಮನೆಗೆ ತೆರಳಿದ್ದಾನೆ.
ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಜಗಳದ ವಿಷಯ ತಿಳಿಯುತ್ತಿದ್ದಂತೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಇಬ್ಬರು ಪರಿಚಿತರು, ಹಳೆಯ ವೈಷಮ್ಯದ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ಘಟನೆಯು ಗಣೇಶ ವಿಸರ್ಜನೆಯ ಮೆರವಣಿಗೆ, ಡಿಜೆ ಸಂದರ್ಭದಲ್ಲಿ ನಡೆದಿಲ್ಲ. ಈ ಕುರಿತು ದೂರು ದಾಖಲಾಗಿದೆ ಎಂದು ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದಾರೆ.