ಹುಬ್ಬಳ್ಳಿ: ಗೊಪ್ಪನಕೊಪ್ಪದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವನ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವನಿಗೆ ಮನಬಂದಂತೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ವಿದ್ಯಾನಗರದ ರುಸ್ತಮ ರೆಸಿಡೆನ್ಸಿ ನಿವಾಸಿಯಾದ ಸಿದ್ದಾರ್ಥ ನಾಯ್ಕಲ (28) ಎಂಬಾತನ ಮೇಲೆಯೇ ಹಲ್ಲೆ ಮಾಡಲಾಗಿದ್ದು, ಕೆ.ಬಿ.ನಗರದ ಪ್ರಭು ಗೆಜ್ಜೆಹಳ್ಳಿ, ಸಂಜು ಗೆಜ್ಜೆಹಳ್ಳಿ, ಶೋಭಾ ಗೆಜ್ಜೆಹಳ್ಳಿ ಹಲ್ಲೆ ಮಾಡಿದವರಾಗಿದ್ದಾರೆ.
ಸೆ.10 ರಂದು ಹಲ್ಲೆಗೊಳಗಾದ ಸಿದ್ದಾರ್ಥ ಅಕ್ಕಿಹೊಂಡದ ಕಾಯಿಪಲ್ಯ ಮಾರುಕಟ್ಟೆ ಬಳಿಯಲ್ಲಿ ಪಾರ್ಕ್ ಮಾಡಿದ್ದ ತನ್ನ ದ್ವಿಚಕ್ರ ವಾಹನವನ್ನು ತೆಗೆಯುವಾಗ ಹಿಂಬದಿಯಿಂದ ಪ್ರಭು, ಸಂಜು ಗೆಜ್ಜೆಹಳ್ಳಿ ಎಂಬಾತರು ಬೈಕ್\’ನಿಂದ ಡಿಕ್ಕಿ ಹೊಡೆಸಿದ್ದಾರೆ.
ಈ ಬಗ್ಗೆ ಸಿದ್ದಾರ್ಥ ಪ್ರಶ್ನೆ ಮಾಡಿದಕ್ಕೆ ಪ್ರಭು ಹಾಗೂ ಸಂಜು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಲು ಮುಂದಾಗಿದ್ದರಂತೆ. ಜಗಳ ಮಾಡುವುದು ಬೇಡವೆಂದು ಅರಿತುಕೊಂಡ ಸಿದ್ದಾರ್ಥ ಅಲ್ಲಿಂದ ಹೋಗಿದ್ದಾನೆ.
ಮರುದಿನ ಕೆ.ಬಿ.ನಗರದಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ಪಾಲಿಕೆ ಉತ್ಸವವಿದ್ದ ಕಾರಣಕ್ಕೆ ಸಿದ್ದಾರ್ಥ ಅಲ್ಲಿಗೆ ತೆರಳಿದ್ದನಂತೆ. ಈ ವೇಳೆ ಅಲ್ಲಿಯೂ ಏಕಾಏಕಿ ಪ್ರಭು ಗೆಜ್ಜೆಹಳ್ಳಿ, ಸಂಜು ಗೆಜ್ಜೆಹಳ್ಳಿ ಸಿಮೆಂಟ್ ಇಟ್ಟಿಗೆಯಿಂದ ತಲೆ, ಬೆನ್ನು, ತೊಡೆ, ಪಕ್ಕಡಿ, ಎದೆಗೆ ಹೊಡೆದಿದ್ದಾರೆ. ಪರಿಣಾಮ ಸಿದ್ದಾರ್ಥನ ತಲೆಯಿಂದ ರಕ್ತ ಹರಿಯತೊಡಗಿದೆ. ಅಷ್ಟರಲ್ಲಿ ಶೋಭಾ ಗೆಜ್ಜೆಹಳ್ಳಿ ಎಂಬಾಕೆ ಅಲ್ಲಿಗೆ ಬಂದು ಪುನಃ ಅವಾಚ್ಯವಾಗಿ ನಿಂದಿಸಿ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೆ ಒಳಗಾದ ಸಿದ್ದಾರ್ಥ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಗಾಯಗೊಂಡಿರುವ ಸಿದ್ದಾರ್ಥ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿದವ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ತನ್ನ ಗಂಡನ ಮೇಲೆ ಹಲ್ಲೆ ಮಾಡಲಾಗಿದೆ. ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಗೊತ್ತಿಲ್ಲ. ಆದರೆ ಗಾಂಜಾ ನಶೆಯಲ್ಲಿ ಹಲ್ಲೆ ಮಾಡಿರುತ್ತಾರೆ. ಅವರಿಗೆ ಅವರ ತಾಯಿಯೇ ಗಾಂಜಾ ತಂದು ಕೊಡುತ್ತಾರೆ. ಆದರೆ ಈವರೆಗೆ ಹಲ್ಲೆ ಮಾಡಿದವರ ಬಂಧನವಾಗಿಲ್ಲ. ನಮಗೆ ಪೊಲೀಸರು ನ್ಯಾಯ ಕೊಡಿಸಬೇಕೆಂದು ಹಲ್ಲೆಗೆ ಒಳಗಾದ ಸಿದ್ದಾರ್ಥನ ಪತ್ನಿ ಮೇಘ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಹು-ಧಾ ಪೊಲೀಸ್ ಕಮಿಷ್ನರೇಟ್ ಮಾದಕ ವಸ್ತು ತಡೆಗೆ ನಿರಂತರ ಅಭಿಯಾನ ನಡೆಸುತ್ತಿದ್ದರೇ, ಇತ್ತ ಅದೇ ಮಾದಕವಸ್ತು ಮನೆಮನೆಗೆ ತಲುಪುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಯಾಕೆಂದರೆ ಹಲ್ಲೆಗೆ ಒಳಗಾದ ಸಿದ್ದಾರ್ಥನ ಪತ್ನಿಯ ಹೇಳಿಕೆ ಇದಕ್ಕೆ ಪುಷ್ಟಿ ನೀಡುವಂತಿದೆ.