ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊರ್ವ ಆಟೋದಿಂದ ಬಿದ್ದು ಹೊಟ್ಟೆಗೆ ಗಾಯ ಪಡಿಸಿಕೊಂಡಿದ್ದಾನೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು, ಆನಂದನಗರದ ಶಿವಪುತ್ರನಗರದ ನಿವಾಸಿ ವಿನಾಯಕ ಚಿತ್ರಗಾರ ಎಂಬಾತ ರವಿವಾರ ಸಂಜೆ ಆನಂದನಗರದ ಅರ್ಜುನನಗರದ ಟ್ರಿಜೂರಿ ಫ್ಯಾಕ್ಟರಿ ಬಳಿಯಲ್ಲಿ ತನ್ನ ಸ್ನೇಹಿತರೊಂದಿಗೆ ಮಾತುಕತೆ ನಡೆಸಿದ್ದಾನೆ.
ಈ ವೇಳೆ ಸಮೀರ್ ಎಂಬಾತ ಏಕಾಏಕಿ ವಿನಾಯಕನ ಹೊಟ್ಟೆಗೆ ಚಾಕುವಿನಿಂದ ಇರಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವಿನಾಯಕನನ್ನು ಸ್ನೇಹಿತರಾದ ದೀಪಕ್ ಹಾಗೂ ಇರ್ಫಾನ್ ಸೇರಿದಂತೆ ಮತ್ತಿತರರು ಕಿಮ್ಸ್ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಆದರೆ ಗಾಯಗೊಂಡಿದ್ದ ವಿನಾಯಕ ಮಾತ್ರ ತಾನು ಆಟೋದಿಂದ ಬಿದ್ದು ಗಾಯಪಡಿಸಿಕೊಂಡಿದ್ದೇನೆ ಎಂಬ ಹೇಳಿಕೆ ನೀಡಿದ್ದ, ಇದೀಗ ಇದೇ ವಿನಾಯಕ ಚಿತ್ರಗಾರ ತನ್ನ ಮೇಲೆ ಚಾಕು ಇರಿತವಾಗಿದೆ. ಚಾಕು ಇರಿತ ಸಮೀರ್ ಅವರ ಮಾವ ಮದಾರ್ ಎಂಬಾತ ಹಣದ ಆಮಿಷ್ ಒಡ್ಡಿ, ಸುಳ್ಳು ಹೇಳುವಂತೆ ಒತ್ತಾಯ ಮಾಡಿದ್ದಾನೆ.
ಆದರೆ ನನಗೆ ನ್ಯಾಯ ಬೇಕಾಗಿದ್ದು, ಮುಂದೆ ಕೂಡಾ ನನಗೆ ಜೀವ ಬೆದರಿಕೆ ಬರಬಹುದು, ನಮ್ಮ ಕುಟುಂಬಕ್ಕೆ ಏನಾದರೂ ಆದರೂ ಸಹಿತ ಮದಾರ್ ಹಾಗೂ ಸಮೀರ್ ಕಾರಣ ಎಂದು ವಿನಾಯಕ ಕರ್ನಾಟಕ ಪಬ್ಲಿಕ್ ವಾಯ್ಸ್\’ಗೆ ಹೇಳಿಕೆ ಕೊಟ್ಟಿದ್ದಾನೆ.
ಇನ್ನು ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.