ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ಇದು ಕರಾಳ ದಿನ. ಅಪ್ಪು ಅಗಲಿ 3 ವರ್ಷ ಕಳೆದಿದೆ. ಆದರೆ ಅವರ ಅಗಲಿಕೆಯ ನೋವು ಮಾತ್ರ ಇನ್ನು ಕರಗಿಲ್ಲ. ಅಕ್ಟೋಬರ್ 29, 2021ರಂದು ಕರುನಾಡಿಗೆ ಅಪ್ಪು ಇನ್ನಿಲ್ಲ ಎನ್ನುವ ಬರಸಿಡಿಲು ಬಂದೆರಗಿತ್ತು. ಯಾರೂ ಕೂಡ ಇದನ್ನು ನಂಬಲು ಸಿದ್ಧರಿರಲಿಲ್ಲ. ಆದರೆ ನಂಬದೇ ಬೇರೆ ವಿಧಿ ಇರಲಿಲ್ಲ.
ತಮ್ಮ 46ನೇ ವಯಸ್ಸಿನಲ್ಲೇ ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಬಹಳ ಗಟ್ಟಿಮುಟ್ಟಾಗಿ ಇದ್ದ ಅಪ್ಪುಗೆ ಹೃದಯಾಘಾತವೇ? ಪ್ರಾಣಪಕ್ಷಿಯೇ ಹಾರಿ ಹೋಯಿತಾ? ಎಂದು ಎಲ್ಲರೂ ಶಾಕ್ ಆಗಿದ್ದರು. ತಮ್ಮ ಸಿನಿಮಾಗಳು ಹಾಗೂ ಸರಳ, ಸಜ್ಜನ ನಡೆ ನುಡಿಯಿಂದ ಪುನೀತ್ ಕರುನಾಡಿನ ಮನೆಮಗನೇ ಆಗಿಬಿಟ್ಟಿದ್ದರು. ಅಂದು ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಇಡೀ ರಾಜ್ಯವೇ ಸ್ತಬ್ಧವಾಗಿತ್ತು, ವಾರದಮಟ್ಟಿಗೆ ಸೂತಕದ ಛಾಯೆ ಆವರಿಸಿತ್ತು.
ಲಕ್ಷಾಂತರ ಜನ ಅಪ್ಪು ಅಂತಿಮ ದರ್ಶನ ಪಡೆದರು. ಇವತ್ತಿಗೂ ಪ್ರತಿ ಕ್ಷಣ ಅಭಿಮಾನಿಗಳು ನೆಚ್ಚಿನ ನಟನನ್ನು ಸ್ಮರಿಸುತ್ತಲೇ ಇದ್ದಾರೆ. ಅಪ್ಪು ಇಲ್ಲದ ನೋವು ಕಾಡುತ್ತಲೇ ಇದೆ.
ಇಂದು ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ, ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ, ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ನೆಚ್ಚಿನ ಆಹಾರವಾದ ಮಟನ್ ಕಿಮಾ, ಮಟನ್ ಮಸಾಲಾ, ಚಿಕನ್ ಬಿರಿಯಾನಿ ಇಟ್ಟು ಪುಣ್ಯ ಸ್ಮರಣೆ ಮಾಡಿದರು.
ಬರೊಬ್ಬರಿ 10 ಕ್ವಿಂಟಲ್ ಚಿಕನ್ ಬಿರಿಯಾನಿ ಮಾಡಿ ಸಾರ್ವಜನಿಕರಿಗೆ ಹಂಚುವ ಮೂಲಕ ಅಪ್ಪು ಅಜರಾಮರ ಎಂಬ ಸಂದೇಶ ರವಾನಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಸಂಕಲ್ಪ ಶೆಟ್ಟರ್, ಮಲ್ಲಪ್ಪ ಶಿರ್ಕೊಳ್, ರಾಘು ಒಡ್ಡಿ, ಕಲ್ಲಪ್ಪ ಶಿರ್ಕೊಳ್, ವಿಶಾಲ್ ಜಾಧವ್ ಸೇರಿದಂತೆ ಅಪ್ಪು ಅಭಿಮಾನಿಗಳು ಭಾಗಿಯಾಗಿದ್ದರು.