ಹುಬ್ಬಳ್ಳಿ: ನಗರದ ಹು-ಧಾ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಹೋಗಿದ್ದು, ಪುನಃ ಪುನರ್ ನಿರ್ಮಾಣ ಮಾಡವಂತೆ ಒತ್ತಾಯಿಸಿ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ನಗರದಲ್ಲಿ ಹು-ಧಾ ಪಾಲಿಕೆ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಶಿವಾಜಿ ಮಹಾರಾಜ್ ಪ್ರತಿಮೆ ಕಳಪೆ ಕಾಮಗಾರಿಯಿಂದಾಗಿ ಕುಸಿದು ನಾಲ್ಕು ವರ್ಷಗಳೇ ಗತಿಸಿರುವುದರೂ ಕೂಡಾ ಇದುವರೆಗೂ ಪ್ರತಿಮೆ ನಿರ್ಮಾಣದ ಗೋಜಿಗೆ ಹೋಗದೆ ಪಾಲಿಕೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಈ ಕುರಿತು ಸಂಘದ ವತಿಯಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ.
ಈ ನಿಟ್ಟಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪುನಃ ನಿರ್ಮಾಣ ಮಾಡುವುದಾದರೂ ಯಾವಾಗ? ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು ಮೂರು ದಿನಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಸಮಾಜದ ಮುಖಂಡರೊಂದಿಗೆ ಪಾಲಿಕೆಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಸೇವಾ ಸಂಘದ ಅಧ್ಯಕ್ಷ ವಿಶಾಲ್ ಜಾಧವ್, ಪಾಲಿಕೆ ಸದಸ್ಯ ದ್ವರಾಜ್ ಕಲ್ಕುಂಟ್ಲ, ಪ್ರಕಾಶ್ ಬರ್ಬುರೆ, ಗಂಗಾಧರ್ ಶೆಟ್ಟರ್, ಹರೀಶ್ ಸರ್ವಳೆ, ಆಕಾಶ್ ಗುಡಿಹಾಳ, ಸುನಿಲ್ ಮರಾಠೆ, ಪ್ರವೀಣ್ ಬುಲ್ಲಾರಿ ಹಾಗೂ ಸೋಮು ನಾಯಕ್ ಉಪಸ್ಥಿತರಿದ್ದರು.