ಹುಬ್ಬಳ್ಳಿ: ಉದ್ಯಮಿಯೊಬ್ಬರಿಗೆ ಮೋಹದ ಬಲೆ ಬೀಸಿ \’ಹನಿಟ್ರ್ಯಾಪ್\’ ಖೆಡ್ಡಾಗೆ ಕೆಡವಿ ಹಣಕ್ಕೆ ಬೇಡಿಕೆ ಇರಿಸಿದ್ದ ಇಬ್ಬರು ಮಹಿಳೆ ಸೇರಿ ಐದು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಮುಲ್ಲಾ ಓಣಿ ನಿವಾಸಿ ಜೋಯಾ ಶಬಾನಾ, ತೂರವಿ ಹಕ್ಕಲದ ಪರವಿನ್ ಬಾನು, ಡಾಕಪ್ಪ್ ಸರ್ಕಲ್ ನಿವಾಸಿ ಸೈಯದ್ ಹಾಗೂ ಹಳೆ ಹುಬ್ಬಳ್ಳಿಯ ನಿವಾಸಿಗಳಾದ ತೌಸಿಪ್,ಅಬ್ದುಲ್ ರೆಹಮಾನ್ ಬಂಧಿತ ಆರೋಪಿಗಳು.
ಬಾಂಡೆ ಸಾಮಾನುಗಳ ಅಂಗಡಿಯ ವ್ಯಾಪಾರಿ ಚಗನ್ ಲಾಲ್ ಚೌಧರಿ ಹನಿ ಟ್ರಾಪ್ ಬಲೆಗೆ ಬಿದ್ದ ವ್ಯಕ್ತಿ. ಅಂಗಡಿಯ ನಾಮಫಲಕದಲ್ಲಿ ಹಾಕಿರುವ ಮೊಬೈಲ್ ನಂಬರ್ ಮೂಲಕ ಗ್ಯಾಂಗ್ ನಲ್ಲಿ ಇರುವ ಸೈಯದ್ ಅನ್ನೋ ವ್ಯಕ್ತಿ ತನ್ನ ಪ್ರಿಯತಮೆ ಮೂಲಕ ಕಾಲ್ ಮಾಡಿಸುತ್ತಿದ್ದ. ನಂತರ ಈ ಮಹಿಳೆ ವ್ಯಕ್ತಿಯ ಜೊತೆ ಸ್ನೇಹ ಬಳಸಿ, ಅವರೊಂದಿಗೆ ಸಲಿಗೆಯಿಂದ ಮಾತನಾಡಿ ತಮ್ಮ ಖೆಡ್ಡಾಗೆ ಬಿಳಿಸುತ್ತಿದ್ದಳಂತೆ. ನಂತರ ಅವರೊಂದಿಗೆ ವೀಡಿಯೋ ಚಿತ್ರೀಕರಣ ಮಾಡಿಕೊಂಡು, ಆ ತುಣುಕುಗಳನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ, ಐದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.
ಬ್ಲ್ಯಾಕ್ ಮೇಲ್ ಗೆ ಬೇಸತ್ತ ವ್ಯಾಪಾರಿ ಅಶೋಕ್ ನಗರ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಿಸಿಬಿ ಪೊಲೀಸರು, ಹನಿಟ್ರ್ಯಾಪ್ ಗ್ಯಾಂಗ್ ಕುರಿತ ಮಾಹಿತಿ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ದಿಢೀರ್ ದುಡ್ಡು ಮಾಡುವ ಆಲೋಚನೆಯೊಂದಿಗೆ ಹನಿಟ್ರ್ಯಾಪ್ ಸಂಚಿನಲ್ಲಿ ಭಾಗಿಯಾಗಿದ್ದರು. ಆರೋಪಿಗಳ ತಂಡ ಬೇರೆ ಯಾರಿಗಾದರೂ ಟ್ರ್ಯಾಪ್ ಮಾಡಿ ವಂಚಿಸಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.