ಹುಬ್ಬಳ್ಳಿ: ನಿನ್ನೆ ಹೊಸ ವರ್ಷದ ಮೊದಲ ದಿನ, ವರ್ಷದ ಮೊದಲ ದಿನ ಅತ್ಯಂತ ಸಂತಸದ ಕ್ಷಣ, ಆದ್ರೆ ಇದೇ ಬುಧವಾರ ಹಳೇಹುಬ್ಬಳ್ಳಿ ಹಾಗೂ ಕಸಭಪೇಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಎರೆಡು ಅಪರಾಧ ಪ್ರಕರಣಗಳಿಗೆ ಸಾಕ್ಷಿಯಾಗಿದೆ.
ನಿನ್ನೆ ಒಂದೇ ದಿನ ನಡೆದ ಎರೆಡು ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹನ್ನೊಂದು ಜನರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಹುಬ್ಬಳ್ಳಿ ಧಾರವಾಡ ಪೋಲಿಸ ಇಲಾಖೆ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಹರಸಾಹಸ ಪಡುವಂತಾಗಿದೆ.
ಈ ಬಗ್ಗೆ ಕಾನೂನು ಸುವ್ಯವಸ್ಥೆ ಡಿಸಿಪಿ ಮಹನಿಂಗ ನಂದಗಾವಿ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯೆ ನಗರದಲ್ಲಿ ಮಾರುತಿ ನಾರಾಯಣಪುರ ಎಂಬಾತನ ಮೇಲೆ ಯುವಕರ ಗುಂಪೊಂದು ಅಟ್ಟಾಡಿಸಿ ಚಾಕುವಿನಿಂದ ಇರಿಯಲಾಗಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡ ಮಾರುತಿಯನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಪ್ರಕರಣವನ್ನು ದಾಖಲಿಸಿಕೊಂಡ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಶಿವಶಂಕರ ಕಾಲೋನಿಯ ನಿವಾಸಿಗಳಾದ ರೋಹಿತ್ ಹಂಚಿನಮನಿ, ವಿಶಾಲ ಬಿಲಾನಾ, ಕುಶಾಲ ವಜ್ಜನ್ನವರ, ಶ್ರೀನಾಥ್ ದುಂಡಿ, ವಿಶಾಲ ಡೋಣಿ, ಅಜಯ್ ಹಂಚಿನಮನಿ, ಪೃಥ್ವಿರಾಜ್ ಕೌದಿ ಎಂಬಾತರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಕಸಬಾಪೇಟೆ ಪೋಲಿಸ ಠಾಣಾ ವ್ಯಾಪ್ತಿಯ ಬಿಡನಾಳ-ಗಬ್ಬೂರ ರಸ್ತೆಯಲ್ಲಿರುವ ಕೆಎಲ್ಇ ಮೆಡಿಕಲ್ ಕಾಲೇಜು ಆವರಣದಲ್ಲಿ ಕಾರ್ಮಿಕರ ನಡುವೆ ನಡೆದ ಮಾರಾಮಾರಿ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಬುಧವಾರ ಮಧ್ಯಾಹ್ನ ನೀರಿನ ವಿಷಯಕ್ಕೆ ನಡೆದ ಗಲಾಟೆಯಲ್ಲಿ ಬಿಹಾರ ಮೂಲದ ಸಂತೋಷ (54), ಬಚ್ಚು (40), ಬಿಕ್ರಮ (34) ಎಂಬುವವರು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.ಈ ಕುರಿತು ಕಸಬಾಪೇಟೆ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.
ಈ ಪ್ರಕರಣವನ್ನು ತನಿಖೆ ನಡೆಸಿರುವ ಪೊಲೀಸರು ಸುಗ್ರಿವ್, ನವೀನ, ಶಿವಕುಮಾರ್, ಗೋವಿಂದ ಎಂಬುವವರನ್ನು ಬಂಧಿಸಿ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಒಟ್ಟಿನಲ್ಲಿ ಅವಳಿನಗರದ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಸಂಪೂರ್ಣ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಹಾಡುಹಗಲೇ ಅಪರಾಧ ಪ್ರಕರಣಗಳು ನಡೆಯುತ್ತಿರೋದು ಜನಸಾಮಾನ್ಯರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಇನ್ನಾದರೂ ಪೊಲೀಸ ಇಲಾಖೆ ಇಂತಹ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಮೂಲಕ ಅವಳಿ ನಗರದ ಜನರು ನಿಟ್ಟುಸಿರು ಬಿಡುವಂತೆ ಮಾಡಬೇಕಿದೆ.