ಧಾರವಾಡ ಜಿಲ್ಲೆ ಅಂದ್ರೆ ವಿದ್ಯಾಕಾಶಿ. ಪೇಡಾ ನಗರಿ ಅಂತಲೇ ಬಿರುದು ಪಡೆದುಕೊಂಡಿರೋ ಜಿಲ್ಲೆ. ಆದ್ರೆ ವಿದ್ಯಾಕಾಶಿಗಿಂತ ಇಲ್ಲಿ ದಿನನಿತ್ಯ ಕಾನೂನುಬಾಹಿರ ಚಟುವಟಿಕೆಗಳೇ ನಡೆಯೋದು ಜಾಸ್ತಿ. ಅಂತಹ ಕಾನೂನು ಬಾಹಿರ ಚಟುವಟಿಕೆಗಳ ಅನಾವರಣವನ್ನ ನಾವು ನಿಮ್ಮ ಮುಂದೆ ಬಿಚ್ಚಿಡ್ತೀವಿ ನೋಡಿ……
ಎಸ್. ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಇಡೀ ಧಾರವಾಡ ಜಿಲ್ಲೆಯಲ್ಲಿ ಇಸ್ಪೀಟ್ ದಂಧೆ ಅವ್ಯಾಹತವಾಗಿ ಎಗ್ಗಿಲ್ಲದೇ ನಡೆಯುತ್ತಿದೆ. ಈವರೆಗೂ ರಾತ್ರಿ ವೇಳೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದ್ದ ಈ ಇಸ್ಪೀಟ್ ದಂಧೆ ಇದೀಗ ಹಗಲು ಹೊತ್ತಲ್ಲೇ ವಿಸ್ತರಣೆಗೊಂಡಿದೆ..ಹುಬ್ಬಳ್ಳಿ ಧಾರವಾಡ ಅವಳಿನಗರ ವ್ಯಾಪ್ತಿಯಲ್ಲಿ ಈಗಾಗಲೇ ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಇಸ್ಪೀಟ್ , ಮಟ್ಕಾ ಅಕ್ರಮ ಸರಾಯಿ ದಂಧೆಗೆ ಒಂದು ಹಂತದ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಾಚರಣೆ ಮಾಡಿ ದಂಧೆಕೋರರ ಹೆಡೆಮುರಿಕಟ್ಟಿದ್ದೂ ಉಂಟು.

ಆದ್ರೆ ಇದೇ ಕಾನೂನು ಬಾಹಿರ ದಂಧೆ ಇದೀಗ ಜಿಲ್ಲಾ ವ್ಯಾಪ್ತಿಗೂ ಅವ್ಯಾಹತವಾಗಿ ವ್ಯಾಪಿಸಿದ್ದು, ಧಾರವಾಡ ಜಿಲ್ಲೆ ಅದರಲ್ಲೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ನೂಲ್ವಿ, ಚನ್ನಾಪುರ, ತಿಮ್ಮಸಾಗರ್, ಕುಸುಗಲ್, ವರೂರ್ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶದಲ್ಲಿ ಹಗಲು ರಾತ್ರಿ ಇಸ್ಪೀಟ್ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳು ಯತೇಚ್ಛವಾಗಿ ನಡೆಯುತ್ತಿವೆ.
ಇನ್ನು ಪೊಲೀಸ್ ಇಲಾಖೆಯ ಯಾವುದೇ ಭಯವೇ ಇಲ್ಲದೇ ರಾಜಾರೋಶವಾಗಿ ನಡೆಯುತ್ತಿರೋ ಈ ದಂಧೆಗಳಿಗೆ ಆಂತರಿಕವಾಗಿ ಪೊಲೀಸ್ ಇಲಾಖೆಯ ಸಿಬ್ಬಂಧಿಗಳೂ ಒಳಗಿಂದೊಳಗೇ ಶಾಮೀಲಾಗಿದ್ದಾರಾ ಅನ್ನೋ ಗಂಭೀರ ಚರ್ಚೆಗಳು , ಅನುಮಾನಗಳು ಗ್ರಾಮೀಣ ಭಾಗದ ಜನರಲ್ಲಿ ಮೂಡಿಸಿವೆ. ಯಾಕಂದ್ರೆ ಗ್ರಾಮೀಣ ಭಾಗದ ಹೊರವಲಯದಲ್ಲಿ ನಡೆಯೋ ಈ ಅಕ್ರಮ ಚಟುವಟಿಕೆಗಳ ಅದರಲ್ಲೂ ಇಸ್ಪೀಟ್ ದಂಧೆ ನಡೆಸುವವರಲ್ಲಿ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳ ಹೆಸರೂ ಕೂಡ ತಳಕು ಹಾಕಿಕೊಂಡಿದ್ದು, ಮತ್ತಷ್ಟು ಅನುಮಾನಗಳಿಗೆ ಪುಷ್ಠಿ ನೀಡುವಂತೆ ಮಾಡಿದೆ.
ಅದೇನೇ ಇರ್ಲಿ ಈವರೆಗೂ ಶಹರ ಭಾಗಗಳಲ್ಲಿ ಅತ್ಯಂತ ಯತೇಚ್ಛವಾಗಿ ನಡೆಯುತ್ತಿದ್ದ ಈ ಇಸ್ಪೀಟ್ ದಂಧೆ ಇದೀಗ ಗ್ರಾಮೀಣ ಭಾಗದಲ್ಲೂ ಟ್ರೆಂಡ್ ಸೆಟ್ ಮಾಡಿದ್ದು, ರೂರಲ್ ಭಾಗದ ಈ ಟ್ರೆಂಡ್ ನ್ನ ಪೊಲೀಸ್ ಇಲಾಖೆ ಯಾವರೀತಿ ಬೆಂಡ್ ಮಾಡುತ್ತೆ ಅನ್ನೋದು ಕಾದುನೋಡಬೇಕಷ್ಟೇ.