ಹುಬ್ಬಳ್ಳಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಗಬ್ಬೂರಿನಲ್ಲಿ ನಡುರಸ್ತೆಯಲ್ಲಿಯೇ ವ್ಯಕ್ತಿಯೊರ್ವನ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿತ್ತು. ಈ ಕುರಿತು ಬೆಂಡಿಗೇರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರದಂದು ಗಬ್ಬೂರಿನ ನಿವಾಸಿ ಮನೋಹರ ಚಾಕಲಬ್ಬಿ ಎಂಬಾತನ ಮೇಲೆ ಕೊಲೆಯತ್ನ ನಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮನೋಹನನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಬಳಿಕ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ, ಡಿಸಿಪಿ ಮಹನಿಂಗ ನಂದಗಾವಿ, ಎಸಿಪಿ ಉಮೇಶ್ ಚಿಕ್ಕಮಠ ದೌಡಾಯಿಸಿ ಪರಿಶೀಲನೆ ನಡೆಸಿದರು.

ಬಳಿಕ ಕೊಲೆಯತ್ನ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆಯನ್ನು ಕೈಗೆತ್ತಿಕೊಂಡ ದಕ್ಷ ಎಸಿಪಿ ಉಮೇಶ್ ಚಿಕ್ಕಮಠ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಸ್ ಆರ್ ನಾಯಕ್ ಹಾಗೂ ಪಿಎಸ್ಐ ರವಿ ವಡ್ಡರ ನೇತೃತ್ವದ ತಂಡ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಪರಶುರಾಮ ಉಪ್ಪಾರ, ಮಹದೇವ ಇರಗಣ್ಣವರ, ಕುಮಾರ ಬಡಿಗೇರ ಎಂದು ಗುರುತಿಸಲಾಗಿದ್ದು, ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.