ಧಾರವಾಡ: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 8 2024 ರಂದು ಕವಲಗೇರಿ ರಸ್ತೆಯಲ್ಲಿ ಬರುವ ರಾಹುಲ್ ಗಾಂಧಿ ನಗರದ ನಿವಾಸಿ ಉಮಾಕಾಂತ ಕರ್ಚಕಟ್ಟಿ ರವರ ಮನೆಯಲ್ಲಿ ಯಾರೋ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ತನಿಖೆಗೆ ಇಳಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗದಗ ಮೂಲದ ಸುನೀಲ ಮುಳಗುಂದ ಎಂದು ತಿಳಿದುಬಂದಿದೆ. ಬಂಧಿತನಿಂದ 6 ಲಕ್ಷ 45 ಸಾವಿರ ಮೌಲ್ಯದ 87 ಗ್ರಾಂ ಚಿನ್ನ, 507 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.

ತಲೆ ಮರಿಸಿಕೊಂಡ ಇನ್ನೊಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದು, ಸದ್ಯ ಬಂಧಿತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಸದರಿ ಪ್ರಕರಣವನ್ನು ಭೇದಿಸಿದ ಧಾರವಾಡ ಶಹರ ಠಾಣೆಯ ಪೊಲೀಸರ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.