ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರನ್ನು ಊರಿಗೆ ಕರೆ ತರುವಾಗ ಬದುಕಿದ ಸಂಗತಿ ಭಾನುವಾರ ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣದ ಮಂಜುನಾಥ್ ನಗರದಲ್ಲಿ ನಡೆದಿದೆ.
ಪಟ್ಟಣದ ಮಂಜುನಾಥ ಬಿಸ್ಟಪ್ಪ ಅಶೋಕ ಗುಡಿಮನಿ ಉರ್ಫ ಮಾಸ್ತರ್ (45) ಎಂಬುವರು ಮೂರು ನಾಲ್ಕು ದಿನದಿಂದ ಅನಾರೋಗ್ಯದಿಂದಾಗಿ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ 3-4 ಗಂಟೆ ಉಸಿರು ಇಲ್ಲದಿದ್ದಾಗ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ ನಂತರ ಅವರ ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಆಂಬ್ಯುಲೆನ್ಸ್ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದಾರೆ.

ಊರು ಹತ್ತಿರ ಬರುತ್ತಿದ್ದಂತೆ ಪತ್ನಿ ‘ಡಾಬಾ ಬಂತು ನೋಡು ಊಟ ಮಾಡುತ್ತೀಯಾ?’ ಎಂದು ಗೋಳಾಡಿ ಕಣ್ಣೀರಿಟ್ಟಾಗ ಮೃತವ್ಯಕ್ತಿ ಉಸಿರು ಬಿಟ್ಟಿದ್ದಾನೆ. ಆಗ ಗಾಬರಿಯಾಗಿ ಶಿಗ್ಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಬದುಕಿರುವದನ್ನು ದೃಢಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅದೇ ವಾಹನದಲ್ಲಿ ಬಂದು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಇವರ ನಿಧನ ಸುದ್ದಿ ಬ್ಯಾನರ್ಗಳು ಪಟ್ಟಣದಲ್ಲಿ ನೇತಾಡಿದವು. ಸ್ಥಳೀಯ ವಾಟ್ಸಪ್ ಗ್ರೂಪ್ನಲ್ಲಿ ನಿಧನ ಸುದ್ದಿಗೆ ಬಹುತೇಕ ಎಲ್ಲರೂ ಓಂ ಶಾಂತಿ ಎಂದು ಸ್ಮರಿಸಿದ್ದರು. ಈಗ ಜೀವ ಉಳಿದ ಸುದ್ದಿ ಕೇಳಿ ‘ಆಯುಷ್ಯ ಕೊಟ್ಟು ದೇವರು ಕಾಪಾಡಲಿ’ ಎಂಬ ಹಾರೈಕೆಗಳನ್ನು ಹರಿಬಿಡುತ್ತಿದ್ದಾರೆ.