ಹುಬ್ಬಳ್ಳಿ: ರಾಜ್ಯದಲ್ಲಿ ಬಡ್ಡಿ ದಂಧೆಕೋರರ ಅಟ್ಟಹಾಸ ಮುಂದುವರೆದಿದೆ. ಬಡ್ಡಿಕೋರರ ಅಟ್ಟಹಾಸಕ್ಕೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾನೆ. ಫೈನಾನ್ಸರ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಕುಂದಗೋಳ ತಾಲುಕಿನ ಎಲಿವಾಳ ಗ್ರಾಮದ ನಿವಾಸಿ ಶಿವಾನಂದ್ ಕಲ್ಲಿಮಣಿ ಎಂಬುವವನೆ ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ನಗರದ ಸಟಲ್ಮೆಂಟ್ ಗಂಗಾಧರ್ ನಗರ ನಿವಾಸಿ ಕಾರ್ತಿಕ್ ಬಳ್ಳಾರಿ ಎಂಬುವವನಿಂದ ಕಳೆದ ಹಲವು ತಿಂಗಳುಗಳ ಹಿಂದೆ ನಾಲ್ಕು ಲಕ್ಷ ಸಾಲ ಪಡೆದಿದ್ದ. ಅದಕ್ಕೆ ಪ್ರತಿಯಾಗಿ ನಾಲ್ಕು ಲಕ್ಷ ಬಡ್ಡಿಯನ್ನು ತುಂಬಿದ್ದಾನೆ.

ಆದ್ರೆ ಬಡ್ಡಿ ಹಣ ತುಂಬಿದ್ದರೂ ಕಾರ್ತಿಕ್ ನಿರಂತರ ಕಿರುಕುಳ ನೀಡಿದ್ದಕ್ಕೆ ಮನನೊಂದು ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು ಬಡ್ಡಿ ಕಿರುಕುಳ ನೀಡಿದ ಕಾರ್ತಿಕ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಮೃತ್ ಶಿವಾನಂದ್ ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಕುರಿತಂತೆ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.