ಹುಬ್ಬಳ್ಳಿ: ಅವರಿಬ್ಬರೂ ಜೋಡಿ ಹಕ್ಕಿ, ಪರಸ್ಪರ ಪ್ರೀತಿಸಿ ಮದುವೆ ಮಾಡ್ಕೊಂಡು ಹೊಸ ಜೀವನ ನಡೆಸಲು ಸಾಕಷ್ಟು ಕನಸು ಕಂಡು ಬೆಂಗಳೂರು ನಿಂದ ಗೋವಾಗೆ ಬಂದಿದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ ಇಬ್ಬರ ನಡುವೆ ಜಗಳ ಶುರುವಾಗಿ ಪ್ರೇಯಸಿಯನ್ನು ಕೊಲೆ ಮಾಡಿ ಪ್ರಿಯಕರ ಇಂದು ಕಂಬಿ ಹಿಂದೆ ಬಿದ್ದಿದ್ದಾನೆ.

ಹೌದು.. ಬೆಂಗಳೂರು ಮೂಲದ ರೋಶನಿ ಎಂಬ ಯುವತಿಯನ್ನು ಅದೇ ಬೆಂಗಳೂರಿನ ಲಿಂಗರಾಜಪುರ ಬಡಾವಣೆಯ ಸಂಜಯ್ ಕೆವಿನ್ ಎಂಬ ಆರೋಪಿ ಮದುವೆಯಾಗೋದಾಗಿ ನಂಬಿಸಿ ಗೋವಾದ ಪ್ರತಾಪನಗರ ಬಳಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ಆರೋಪಿ ಅಲ್ಲಿಂದ ತಪ್ಪಿಸಿಕೊಂಡು ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದನು.

ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈತನನ್ನು ಸಾರ್ವಜನಿಕರ ಮಾಹಿತಿ ಮೇರೆಗೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರ ವಶಕ್ಕೆ ಪಡೆದಿದ್ದರು. ಆರೋಪಿ ಟವರ್ ಲೋಕೆಶನ್ ಹುಬ್ಬಳ್ಳಿಯಲ್ಲಿ ಇರೋ ಬಗ್ಗೆ ಮಾಹಿತಿ ಲಭ್ಯವಾದಾಗ ಹುಧಾ ಪೊಲೀಸರಿಗೆ ಗೋವಾ ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಪರಿಶೀಲಿಸಿದಾಗ ಸಂಜಯ್ ಕೊಲೆ ಆರೋಪಿ ಎಂಬುದು ದೃಢಪಟ್ಟಿದೆ. ಅಂದೇ ಹುಬ್ಬಳ್ಳಿಗೆ ಗೋವಾ ಪೊಲೀಸರು ಬಂದು ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ.

ಒಟ್ಟಿನಲ್ಲಿ ದೇಶದ್ಯಾಂತ ಪ್ರೀತಿ ಪ್ರೇಮದ ಜಾಲಕ್ಕೆ ಬಿದ್ದು ಬೆದರಿಕೆ, ಕೊಲೆ ಹೆಚ್ಚುತ್ತಿರುವುದು ಎಲ್ಲೋ ಒಂದು ಕಡೆ ಯುವಪೀಳಿಗೆಗಳ ಹುಚ್ಚಾಟಕ್ಕೆ ಬಲಿ ಆಗ್ತಿರೋದು ನಿಜಕ್ಕೂ ವಿಷಾದನೀಯ. ಪೋಷಕರು ತಮ್ಮ ಮಕ್ಕಳ ಚಲನವಲನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರಿಂದ ಮುಂದೆ ಆಗುವಂತಹ ಅನಾಹುತಗಳಿಂದ ಜಾಗೃತಿ ವಹಿಸಬೇಕಿದೆ.