ಹುಬ್ಬಳ್ಳಿ: ನಗರದ ಹೊಸೂರು ಬಸ್ ನಿಲ್ದಾಣದಿಂದ ಕುಂದಗೋಳ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವೃದ್ಧರು ಕಳೆದುಕೊಂಡ ವ್ಯಾನಿಟಿ ಬ್ಯಾಗ್ನ್ನು ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕೇವಲ ನಾಲ್ಕು ಗಂಟೆಗಳೊಳಗೆ ಪತ್ತೆ ಹಚ್ಚಿ ಅವರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಂಪತಿಗಳಿಬ್ಬರು ಕುಂದಗೋಳ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಸುಮಾರು 50 ಗ್ರಾಂ ಬಂಗಾರದ ಆಭರಣಗಳು ಹಾಗೂ ರೂ.10,500 ನಗದು ಇದ್ದ ವ್ಯಾನಿಟಿ ಬ್ಯಾಗ್ವನ್ನು ಕಳೆದುಕೊಂಡಿದ್ದರು. ತಕ್ಷಣವೇ ಅವರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಬ್ಯಾಗ್ ಸುರಕ್ಷಿತವಾಗಿ ಪತ್ತೆಯಾಗಿದೆ.

ಪೊಲೀಸರು ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸಾಕ್ಷ್ಯಾಧಾರಗಳನ್ನು ಆಧರಿಸಿ ಕ್ರಮ ಕೈಗೊಂಡು ಈ ಯಶಸ್ಸು ಸಾಧಿಸಿದ್ದಾರೆ.
ಸಾಮಾನ್ಯ ಜನರಲ್ಲಿ ಭದ್ರತೆ ಹಾಗೂ ವಿಶ್ವಾಸದ ಭಾವನೆ ಮೂಡಿಸಿರುವ ಈ ಘಟನೆಗೆ ಸಾರ್ವಜನಿಕರಿಂದ ಪೊಲೀಸರು ಶ್ಲಾಘನೆ ಪಡೆಯುತ್ತಿದ್ದಾರೆ. ವಿದ್ಯಾನಗರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾದ ಶಿವಾನಂದ್ ತಿರುಕಣ್ಣವರ್, ಪರಶುರಾಮ್ ಹಿರಗನ್ನವರ್, ಅನಿಲ್ ಹುಗ್ಗಿ, ಸಯ್ಯದ ಅಲಿ ತಹಶೀಲ್ದಾರ್ ಅವರ ಕಾರ್ಯಕ್ಷಮತೆಗೆ ಅಭಿನಂದನೆ ವ್ಯಕ್ತವಾಗುತ್ತಿದೆ.