ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಕಿಮ್ಸ್ ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿ ಇದ್ದೆ ಇರುತ್ತದೆ. ಇದೀಗ ವೈದ್ಯಕೀಯ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮದ ನೆಪದಲ್ಲಿ ವಿದ್ಯಾರ್ಥಿಗಳು ಅಬ್ಬರದ ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು. ಇದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಈ ಹಿಂದೆ ಗಣೇಶನನ್ನು ಕೋಡಿಸಿದ್ದರು. ಆಗ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಅಬ್ಬರದ ನಡುವೆ ಕಿಮ್ಸ್ ವಿದ್ಯಾರ್ಥಿಗಳು ಭರ್ಜರಿ ಡ್ಯಾನ್ಸ್ ಮಾಡಿದರು. ಆದರೆ ಆಸ್ಪತ್ರೆ ಆವರಣದಲ್ಲಿಯೇ ಡಿಜೆ ಹಚ್ಚಿದ್ದರಿಂದ ಪೊಲೀಸ್ ಕಮೀಷನರ್ ಇಲ್ಲಿ ಡಿಜೆ ಹಚ್ಚಬೇಡಿ ಎಂದು ವಾರ್ನ್ ಮಾಡಿದ್ದರು.
ಆದರೂ ಕಿಮ್ಸ್ ಆಸ್ಪತ್ರೆಯಲ್ಲಿ ನೂರಾರು ರೋಗಿಗಳಿದ್ದರೂ, ಇತ್ತ ಕಮೀಷನರ್ ಆದೇಶಕ್ಕೂ ಡೋಂಟ್ ಕೇರ್ ಎಂದು ಕಿಮ್ಸ್ ವಿದ್ಯಾರ್ಥಿಗಳು ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದರು.
ಅದರಂತೆ ಇಂದು ಕಿಮ್ಸ್ ಆಸ್ಪತ್ರೆ ಎಂಬುದನ್ನು ಮರೆತು ಘಟಿಕೋತ್ಸವದ ನೆಪದಲ್ಲಿ ಕಿಮ್ಸ್ ಆಡಳಿತ ಭವನದ ಮುಖ್ಯದ್ವಾರದ ಬಳಿಯಲ್ಲಿ ಡಿಜೆ ಹಚ್ಚಿ ವಿದ್ಯಾರ್ಥಿಗಳು ಭರ್ಜರಿ ಸ್ಟೇಪ್ ಹಾಕಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಜನರ ಆರೋಗ್ಯದ ಕಾಳಜಿ ವಹಿಸುವವರೇ ಈ ರೀತಿಯಾಗಿ ರೋಗಿಗಳ ಆರೋಗ್ಯಕ್ಕೆ ಹಾನಿಯಾಗುವಂತೆ ಡಿಜೆ ಹಚ್ಚಿ ಕುಣಿಯುತ್ತಿರುವುದು ಎಷ್ಟರಮಟ್ಟಿಗೆ ಸರಿ? ಇನ್ನು ಈ ಬಗ್ಗೆ ಸಂಬಂಧಿಸಿದ ಕಿಮ್ಸ್ ಆಡಳಿತ ಹಾಗೂ ಪೋಲಿಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳುವುದು ಎಂಬುದನ್ನು ಕಾದು ನೋಡಬೇಕಿದೆ.