ಬೆಂಗಳೂರು: ವಿಜಯಪುರ ಜಿಲ್ಲೆಯ ನಾಗಠಾಣದ ಮಾಜಿ ಶಾಸಕ ಜೆಡಿಎಸ್‌ನ ದೇವಾನಂದ ಚವ್ಹಾಣ ಅವರಿಗೆ ಲೋಕಸಭೆ ಟಿಕೆಟ್ ಕೊಡಿಸುವುದಾಗಿ ಹೇಳಿ 1.75 ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ಕೇಂದ್ರ ಸಚಿವರ ಸಹೋದರ, ಬ್ಯಾಂಕ್ ನಿವೃತ್ತ ಅಧಿಕಾರಿ ಗೋಪಾಲ್ ಜೋಶಿ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ಗೋಪಾಲ ಜೋಶಿ ಅವರ ಸಹೋದರಿ ವಿಜಯಲಕ್ಷ್ಮೀ ಜೋಶಿ, ಪುತ್ರ ಅಜಯ್ ಜೋಶಿ ಅವರ ವಿರುದ್ಧವೂ ಪೊಲೀಸರು ವಂಚನೆ ಸೇರಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ದೇವಾನಂದ್ ಪುಲ್‌ಸಿಂಗ್ ಚವ್ಹಾಣ್ ಅವರಿಗೆ ಕಳೆದ 2024ರ ಲೋಕಸಭೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋಪಾಲ್ ಜೋಶಿ ಅವರು ಭರವಸೆ ನೀಡಿ ಹಣ ಪಡೆದರು ಎಂದು ಆರೋಪಿಸಲಾಗಿದೆ. ಹುಬ್ಬಳ್ಳಿಯ ಪ್ರಹ್ಲಾದ್ ಜೋಶಿ ಅವರ ಕಚೇರಿಯಲ್ಲಿ 5 ಕೋಟಿ ರೂ. ಸಿದ್ದತೆ ಮಾಡಿಕೊಳ್ಳುವಂತೆ ಗೋಪಾಲ ಜೋಶಿ ಹೇಳಿದ್ದರು. ಅಷ್ಟೊಂದು ಹಣ ಇಲ್ಲ ಎಂದು ವಾಪಸ್ ಬಂದವರಿಗೆ ಮರುದಿನ ಕರೆ ಮಾಡಿರುವ ಗೋಪಾಲ್ ಜೋಶಿ 5 ಕೋಟಿ ಒಮ್ಮೆಲೆ ಕೊಡುವುದು ಬೇಡ, ಅಡ್ವಾನ್ಸ್ 25 ಲಕ್ಷ ರೂ. ನೀಡಿ, ಉಳಿದ ಹಣಕ್ಕೆ ಶೂರಿಟಿಗಾಗಿ ಚೆಕ್ ನೀಡಬೇಕು ಎಂದು ಹೇಳಿದ್ದರು ಎಂದು ದೇವಾನಂದ ಅವರ ಪತ್ನಿ ಸುನಿತಾ ಚವ್ಹಾಣ್ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಿಜಯಲಕ್ಷ್ಮೀ ಜೋಶಿ ಮನೆಯಲ್ಲಿ 25 ಲಕ್ಷ ರೂ. ನೀಡಿ, ಉಳಿದ 5 ಕೋಟಿ ರೂ. ಚೆಕ್ ಪಡೆದಿದ್ದಾರೆ. ಆಗಲೇ ಗೋಪಾಲ ಜೋಶಿ ಅವರು ಕೇಂದ್ರ ಸಚಿವ ಅಮಿತ ಶಾ ಅವರ ಪಿಎಗೆ ಕರೆ ಮಾಡಿದಂತೆ ನಟಿಸಿ ನಿಮಗೆ ಲೋಕಸಭೆ ಟಿಕೆಟ್ ಸಿಗುವುದು ನಿಕ್ಕಿಯಾಗಿದೆ ಎಂದು ಹೇಳಿ ಕಳುಹಿಸಿದ್ದರು ಎಂದು ಹೇಳಲಾಗಿದೆ. ಆದರೆ ನಂತರ ಚವ್ಹಾಣ್ ಅವರಿಗೆ ಟಿಕೆಟ್ ಸಿಗಲಿಲ್ಲ.
ಹೀಗಾಗಿ ಹಣ ವಾಪಸ್ ನೀಡುವಂತೆ ಅವರು ಕೇಳಿದ್ದಾರೆ. ಶೂರಿಟಿಗಾಗಿ ನೀಡಿರುವ ಚೆಕ್ ಮಾತ್ರ ಮರಳಿಸಿ, 200 ಕೋಟಿ ಪ್ರಾಜೆಕ್ಟ್ ಬಿಲ್ ಬರುವುದು ಬಾಕಿ ಇದೆ. ನಮಗೆ ಇನ್ನೂ 1.75 ಕೋಟಿ ರೂ. ಬೇಕಾಗಿದೆ. ಕೆಲ ದಿನದಲ್ಲಿ ನನ್ನ 200 ಕೋಟಿ ಪ್ರಾಜೆಕ್ಟ್ ಹಣ ಬಂದ ಬಳಿಕೆ ನಿಮ್ಮ 25 ಲಕ್ಷ ಸೇರಿಸಿ ಎಲ್ಲವನ್ನು ವಾಪಸ್ ನೀಡುವುದಾಗಿ ಗೋಪಾಲ್ ಜೋಶಿ ಹೇಳಿದರು ಎಂದು ಆರೋಪಿಸಲಾಗಿದೆ. 24.4.2024 0 1.75 ಕೋಟಿ ಹಣವನ್ನು , ಗೋಪಾಲ್ ಜೋಶಿ ಅವರ ಸಹೋದರಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಈಗ ಹಣ ವಾಪಸ್ ನೀಡದೆ ವಂಚಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣ ಕೇಳಲು ಹೋದಾಗ ವಿಜಯಲಕ್ಷ್ಮೀ ಅವರ ಮನೆಯಿಂದ ಹೊರದಬ್ಬಿ ಜಾತಿನಿಂದನೆ ಕೂಡ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಗೋಪಾಲ ಜೋಶಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.