ಹುಬ್ಬಳ್ಳಿ:ಹಣ ಡಬಲ್ ಮಾಡಿ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಖತರ್ನಾಕ ಆಸಾಮಿಯನ್ನು ಗೋಕುಲ ರಸ್ತೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಸೋಲಾಪುರ ನಿವಾಸಿ ವಿನಾಯಕ ವಾಘಚವಾರೆ ಎಂಬಾತನೇ ಮೋಸ ಮಾಡಿದ ವ್ಯಕ್ತಿ. ಈತ ನಗರದ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ ತಾನು ಗಣಿಗಾರಿಕೆ ಉದ್ಯಮ ನಡೆಸುತ್ತಿದ್ದು, ಈ ವ್ಯವಹಾರದಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ, ಆ ಹಣವನ್ನು ನಾನು ದ್ವಿಗುಣ ಮಾಡಿಕೊಡುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣವನ್ನು ಪಡೆದಿದ್ದ. ಬಳಿಕ ಹೂಡಿಕೆ ಮಾಡಿದ ಹಣಕ್ಕೆ ಲಾಭವನ್ನು ನೀಡದೇ, ಕೊಟ್ಟ ಹಣವನ್ನು ಕೂಡ ವಾಪಾಸ್ ಕೊಡದೇ ಮೋಸ ಮಾಡಿದ್ದಾನೆ.

ಅಷ್ಟೇ ಅಲ್ಲದೇ ಹಣ ಕಳೆದುಕೊಂಡಿದ್ದ ಉದ್ಯಮಿಗೆ ವಿನಾಯಕ ಚೆಕ್\’ಗಳನ್ನು ನೀಡಿದ್ದ, ಅವುಗಳು ಕೂಡಾ ಬೌನ್ಸ್ ಆಗಿದ್ದು, ಹೀಗಾಗಿ ವಿನಾಯಕ ವಿರುದ್ಧ ಹಣ ಕಳೆದುಕೊಂಡ ಉದ್ಯಮಿ ಪ್ರಕರಣ ದಾಖಲಿಸಿ ಕೋರ್ಟ್\’ನಲ್ಲಿ ದಾವೆ ಹೂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿನಾಯಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ, ಹಾಗಾಗಿ ವಿನಾಯಕ ಮೇಲೆ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಗೋಕುಲ ರಸ್ತೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಖಚಿತ ಮಾಹಿತಿ ಮೇರೆಗೆ ಪುಣೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.