ಹುಬ್ಬಳ್ಳಿ: ಸಂಬಂಧಿಕರು ಇಬ್ಬರು ಪರಸ್ಪರ ಮಾರಾಮಾರಿ ಜಗಳವಾಡಿ ಪರಿಸ್ಥಿತಿ ವಿಕೋಪಕ್ಕೆ ತೆರಳಿದ ಪರಿಣಾಮ ಕಾರ್ ಡಿಕ್ಕಿಪಡಿಸಲು ಬಂದ ಸಂದರ್ಭದಲ್ಲಿ ಐವರಿಗೆ ಡಿಕ್ಕಿಪಡಿಸಿ ಗಾಯಗೊಳಿಸಿದ್ದು ಗಾಯಾಳುಗಳನ್ನು ನಗರದ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದ್ದು, ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ನಗರದ ವಿದ್ಯಾನಗರದ ಆರ್ಟ್ಸ್ ಕಾಲೇಜು ಬಳಿಯಲ್ಲಿ ಸಂಬಂಧಿಗಳಾದ ಅಳಿಯ ಹಾಗೂ ಮಾವ ನಡುವೆ ಈ ಘಟನೆ ಜರುಗಿದ್ದು, ಘಟನಾ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕೆಲ ತಿಂಗಳುಗಳ ಹಿಂದೆ ತಮ್ಮದೇ ಅಂಗಡಿಯೊಂದರಲ್ಲಿ ಪ್ರಿಯಾ ಎಂಬ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಘಟನೆಯ ವಿಚಾರವಾಗಿ ಪ್ರಿಯಾ ಪತಿ ವಿನೋದ್ ಬೊಂಗಾಳೆ ಹಾಗೂ ಪ್ರಿಯಾ ತಮ್ಮ ರಾಹುಲ್ ರೆಣಕೆ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಸಂಭವಿಸಿದೆ. ಬಳಿಕ ರಾಹುಲ್ ಮೇಲೆ ವಿನೋದ್ ಕಾರ್ ಡಿಕ್ಕಿಪಡಿಸಲು ಮುಂದಾದ ಸಂದರ್ಭದಲ್ಲಿ ರಾಹುಲ್ ತಪ್ಪಿಸಿಕೊಂಡರೇ ಇತ್ತ ಸಾರ್ವಜನಿಕರ ಮೇಲೆ ಕಾರ್ ಡಿಕ್ಕಿಪಡಿಸಿದ್ದಾನೆ.
ಡಿಕ್ಕಿಪಡಿಸಿದ ಪರಿಣಾಮ ಮಂಜುನಾಥ ಪೂಜಾರಿ, ಪ್ರಶಾಂತ ಭೂತೆ, ಗರ್ಭಿಣಿ ಮಹಿಳೆಯಾದ ಅಶ್ವನಿ ಯಲಿಗಾರ, ಲಕ್ಷ್ಮೀ ಬೆಳವಡಿ, ಇಸ್ಮಾಯಿಲ್ ಯಾದವಾಡ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಗಾಯಾಳುಗಳು ನಗರದ ಉತ್ತರ ಸಂಚಾರ ಪೊಲೀಸ್ ಠಾಣೆಗೆ ಭೇಟಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸದ್ಯ ಘಟನೆ ಕುರಿತಂತೆ ಗಾಯಗೊಂಡ ಜನರು ಉತ್ತರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದು, ಇತ್ತ ಮಾವ ಹಾಗೂ ಅಳಿಯ ವಿದ್ಯಾನಗರ ಪೋಲಿಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.