ಧಾರವಾಡ: ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮದ್ಯದ ಸಮೇತವಾಗಿ ಬಂಧಿಸುವಲ್ಲಿ ಸಿಸಿಬಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಧಾರವಾಡದ ಹೊನ್ನಾಪುರ ಗ್ರಾಮದ ಸೋಮಪ್ಪ ಮಿಸಗೇರಿ (27) ಬಂಧಿತನಾಗಿದ್ದು, ಈತ ಫೆ.29 ರಂದು ಧಾರವಾಡದ ಸಪ್ತಾಪುರ ಬಳಿಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ವಿಭಾಗದ ಎಸ್.ಟಿ.ಒಡೆಯರ್ ನೇತೃತ್ವದ ಸಿಸಿಬಿ ಇನ್ಸ್ಪೆಕ್ಟರ್ ಪಿ.ಆರ್.ಗಂಗೇನಹಳ್ಳಿ ಮತ್ತವರ ಸಿಬ್ಬಂದಿಗಳ ತಂಡ ದಾಳಿ ಮಾಡಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 60 ಸಾವಿರ ರೂ ಮೌಲ್ಯದ 141.60 ಲೀಟರ್ ಮದ್ಯ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ ಇಂಡಿಕಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಒಟ್ಟು 1.6 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಸಿಸಿಬಿ ಪೋಲಿಸರು ವಶಪಡಿಸಿಕೊಂಡು, ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.
ಇನ್ನು ಅಕ್ರಮ ಸಾರಾಯಿ ಮಾರಾಟಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಸಿಬಿ ವಿಭಾಗದ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪೋಲಿಸ್ ಆಯುಕ್ತರು ಶ್ಲಾಘಿಸಿದ್ದಾರೆ.