ಧಾರವಾಡ: ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ತೇಗೂರು ಚೆಕ್ ಪೋಸ್ಟ್‌ನಲ್ಲಿ ನಿನ್ನೆ ರಾತ್ರಿ ತಪಾಸಣೆ ವೇಳೆ ಕೆಎಸ್‌ಆರ್‌ಟಿಸಿಯ ನಿಪ್ಪಾಣಿ-ಗಂಗಾವತಿ ಬಸ್‌ನಲ್ಲಿ ದಾಖಲೆ ಇಲ್ಲದ ₹38,50,000 ಮೊತ್ತದ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 21 ರಂದು ರಾತ್ರಿ 11-35 ಗಂಟೆಗೆ ತೇಗೂರ ಚೆಕ್ ಪೋಸ್ಟ್‌ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-37-ಎಫ್-0748 (ನಿಪ್ಪಾಣಿ-ಗಂಗಾವತಿ) ನಂಬರ್ ಹೊಂದಿದ ಬಸ್‌ನಲ್ಲಿ ಮಹಾರಾಷ್ಟ್ರ ಕೊಲ್ಲಾಪುರದ ಪ್ರಕಾಶಕುಮಾರ (47) ಹುಕುಮಜಿ ಮಾಲಿ ಎಂಬಾತ ಒಟ್ಟು 778 ಗ್ರಾಂ ತೂಕದ ಬೋರಮಾಳ ಸರ, ಗುಂಡುಗಳು, ಲಾಕೆಟ್ ಇರುವ ಬಂಗಾರದ ಆಭರಣಗಳು ತೆಗೆದುಕೊಂಡು ಕೊಲ್ಲಾಪುರದಿಂದ ಸಿಂಧನೂರ ಕಡೆಗೆ ಹೋಗುತ್ತಿದ್ದ. ಆತ ತೋರಿಸಿದ ಬಿಲ್‌ಗಳಲ್ಲಿ ಇರುವ ಬಂಗಾರದ ಆಭರಣಗಳ ತೂಕಕ್ಕೂ ಹಾಗೂ ತಪಾಸಣೆಯಲ್ಲಿ ಸಿಕ್ಕ ಬಂಗಾರದ ಆಭರಣಗಳ ತೂಕಕ್ಕೂ ವ್ಯತ್ಯಾಸ ಇದ್ದು, ಸರಿಯಾದ ಮಾಹಿತಿಯನ್ನು ಬಿಲ್ಲುಗಳಲ್ಲಿ ನಮೂದಿಸದೇ ಮರೆಮಾಚಿ ಯಾವುದೋ ಅಪರಾಧ ಕೃತ್ಯ ಎಸಗುವ ಸಲುವಾಗಿ ತೆಗೆದುಕೊಂಡು ಹೊರಟಿರುವ ಸಂಶಯ ಬಲವಾಗಿ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಿಕೊಂಡ ಆಭರಣಗಳನ್ನು ಮುಂದಿನ ಕ್ರಮ ಜರುಗಿಸಲು ಕಲಂ 98 ಕೆ.ಪಿ ಆ್ಯಕ್ಟ್ ಅಡಿಯಲ್ಲಿ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.