ಹುಬ್ಬಳ್ಳಿ: ಸಾರ್ವಜನಿಕರ ಹೆಸರಿನಲ್ಲಿ ಖಾತೆ ತೆರೆದು ಆನ್ಲೈನ್ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂದು ಆಸೆ ತೋರಿಸಿ ಲಕ್ಷಾಂತರ ರುಪಾಯಿ ಹಣ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹು-ಧಾ ನಗರ ಸಿಇಎನ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಇತ್ತೀಚಿಗೆ ನಗರದ ವಿದ್ಯಾನಗರ ನಿವಾಸಿಯೊಬ್ಬರಿಗೆ ಆನ್ಲೈನ್ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ಹೇಳಿ 84,11,000 ರೂ. ಆನ್ಲೈನ್ ಮುಖಾಂತರ ವರ್ಗಾವಣೆ ಮಾಡಿ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಬೆನ್ನುಹತ್ತಿದ ಪಿಐ ಬಿ.ಕೆ. ಪಾಟೀಲ ನೇತೃತ್ವದ ತಂಡವು ದೂರುದಾರರ ಖಾತೆಯಿಂದ ಆನ್ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿಕೊಂಡಿದ್ದ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು ಪರಿಶೀಲನೆ ನಡೆಸಿದಾಗ ಆರೋಪಿಗಳು ಹುಬ್ಬಳ್ಳಿಯ ಐ.ಡಿ.ಎಫ್.ಸಿ. ಬ್ಯಾಂಕಿನಲ್ಲಿ ಹಣ ವಿಥ್ಡ್ರಾ ಮಾಡಿಕೊಂಡ ಬಗ್ಗೆ ತಿಳಿದು ಬಂದಿದೆ. ಕೂಡಲೇ ತನಿಖಾ ತಂಡವು ಆರೋಪಿತರನ್ನು ಪತ್ತೆಮಾಡಿ ಉಣಕಲ್ಲಿನ ನಿವಾಸಿ ಅಜಯ ಹಿರೇಮಠ(23), ವಿದ್ಯಾನಗರದ ಭರತ್ ಜೈನ್(27) ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಈ ಕುರಿತು ಸಿಇನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಚುರುಕುಗೊಂಡಿದೆ.