ಹುಬ್ಬಳ್ಳಿ: ಹು-ಧಾ ಅವಳಿನಗರದಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ಅಪರಾಧ ಕೃತ್ಯಗಳಿಗೆ ತಡೆಗಟ್ಟುವ ನಿಟ್ಟಿನಲ್ಲಿ ಹು-ಧಾ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಪೊಲೀಸರು ರೌಡಿ ಶೀಟರ್ ಗಳಿಗೆ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ವಿದ್ಯಾನಗರದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಭಾನುವಾರ ಪೊಲೀಸರು ರೌಡಿ ಶೀಟರ್ ಗಳ ಮನೆ ಮೇಲೆ ಇನ್ಸ್ಪೆಕ್ಟರ್ ಡಿ.ಕೆ ಪಾಟೀಲ್ ನೇತೃತ್ವದಲ್ಲಿ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ಹಾಗೂ ಸಿಬ್ಬಂದಿಗಳ ತಂಡ ದಾಳಿ ನಡೆಸುವ ಮೂಲಕ ಎಚ್ಚರಿಕೆಯ ಸಂದೇಶ ನೀಡುವ ಕಾರ್ಯಕ್ಕೆ ಮುಂದಾದರು.
ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ಮಾಡಿ ಪೊಲೀಸರು ಪರಿಶೀಲನೆ ನಡೆಸಿ, ರೌಡಿ ಶೀಟರ್ ಗಳ ದಿನಚರಿ ಹಾಗೂ ಕುಟುಂಬಸ್ಥರ ಮಾಹಿತಿ ಕಲೆ ಹಾಕಿದರು. ಈ ವೇಳೆ ಅಪರಾಧ ಕೃತ್ಯಗಳು ಹಾಗೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಾಗೂ ಯಾವುದಾದರೂ ಅಪರಾಧ ಕೃತ್ಯಗಳಿಗೆ ಭಾಗಿಯಾದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ನಿರಂತರವಾಗಿ ನಿಗಾ ಇಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.