ವೃದ್ಧನೊಬ್ಬ ತನ್ನ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಿವಪುರದಲ್ಲಿ ನಡೆದಿದೆ.
ನಾಗವ್ವ (58) ಕೊಲೆಯಾದವರು. ಶೇಖಪ್ಪ (60) ಕೊಲೆ ಮಾಡಿದ ಆರೋಪಿ. ಕಳೆದ ರಾತ್ರಿ ನಾಗವ್ವ ಹಾಗೂ ಶೇಖಪ್ಪ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು ಸಿಟ್ಟಿನಲ್ಲಿ ಶೇಖಪ್ಪ ಮನೆಯಲ್ಲಿದ್ದ ದೊಣ್ಣೆಯಿಂದ ನಾಗವ್ವಳ ತಲೆಗೆ ಹೊಡೆದಿದ್ದಾನೆ. ಒಂದೇ ಏಟಿಗೆ ಕುಸಿದು ಬಿದ್ದ ನಾಗವ್ವ ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಹಾನಗಲ್ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶೇಖಪ್ಪನನ್ನು ಪೊಲೀಸರು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.