ಹುಬ್ಬಳ್ಳಿ: ಗಾಂಜಾ ಮಾರಟವನ್ನೇ ಬಿಸಿನೆಸ್ ಮಾಡಿಕೊಂಡಿದ್ದ ದಂಧೆಕೋರರ ಹೆಡೆಮುರಿ ಕಟ್ಟುವಲ್ಲಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೈಭವ ಪರಬ, ರಾಕೇಶ ನಾಯ್ಕ ಇವರ ವಿರುದ್ಧ ಅಗಷ್ಟ್ 7 ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೆನ್ನತ್ತಿದ ಪೊಲೀಸರು ಅಗಷ್ಟ್ 12 ರಂದು ಗಾಂಜಾ ಮಾರಾಟವನ್ನೇ ರೂಢಿಸಿಕೊಂಡಿದ್ದ ದಂಧೆಕೋರರಾದ ಕಮರಿಪೇಟ್ ನಿವಾಸಿ ಗಣಪತಸಾ ಅಥಣಿ, ಧಾರವಾಡ ಮನಿಕಿಲ್ಲಾ ಮಾರುತಿ ಸಬರದ್ ಧಾರವಾಡ ನುಗ್ಗಿಕೇರಿಯ ಚಂದ್ರಪ್ಪ ಕಮ್ಮಾರನನ್ನು ಬಂಧಿಸಿ ಇವರ ಬಳಿ ಇದ್ದ 1576 ಗ್ರಾಂ. ಗಾಂಜಾ , ಒಂದು ಬೈಕ್ ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ದಾಳಿ ಸಂದರ್ಭದಲ್ಲಿ ಗಾಂಜಾ ಮಾರಾಟಗಾರರ ಬಳಿ ಗಾಂಜಾ ಖರೀದಿಸಲು ಬಂದಿದ್ದ ಮೂರು ಜನ ಆರೋಪಿಗಳಾದ ಗಣೇಶ ಯಾದವ, ರಮೇಶ್ ಮಾದಾರ, ನಿತಿನ್ ಮೇದಾರ ಎಂಬವರ ಬಳಿ 54 ಗ್ರಾಂ ಗಾಂಜಾ ಹಾಗೂ ಮೂರು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 8 ಜನ ಆರೋಪಿಗಳನ್ನು ವಶಕ್ಕೆ ಪಡೆಸಿಕೊಂಡಿರುವ ಪೊಲೀಸರು ಅವರಿಂದ ಒಟ್ಟು 1630 ಗ್ರಾಂ. ತೂಕದ ಗಾಂಜಾ, ಒಂದು ಬೈಕ್, 7 ಮೊಬೈಲ್ ಫೋನ್ ಹಾಗೂ 2300 ರೂ. ನಗದು ಸೇರಿದಂತೆ ಬರೋಬ್ಬರಿ 2,50,000 ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಇನ್ನು ಗಾಂಜಾ ದಂಧೆಕೋರರನ್ನು ಬಂಧಿಸಿ ಜೈಲಿಗೆ ಅಟ್ಟಿದ ಉಪನಗರ ಠಾಣೆಯ ಪೊಲೀಸರ ಕಾರ್ಯವೈಖರಿಯನ್ನು ಹುಬ್ಬಳ್ಳಿ ಧಾರವಾಡ ಹಿರಿಯ ಪೋಲಿಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಏನೇಯಾಗಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಿದ ಹಿನ್ನಲೆ ಫೀಲ್ಡ್ ಗೆ ಇಳಿದ ಖಾಕಿ ಪಡೆ ಮೂಲೆ ಮೂಲೆಗಳಿಂದ ಗಾಂಜಾ ಸೇವನೆ ಹಾಗೂ ಗಾಂಜಾ ಮಾರಾಟಗಾರರನ್ನು ಹೆಡೆಮುರಿ ಕಟ್ಟುತ್ತಲೇ ಬಂದಿದೆ. ಇಷ್ಟಾದರೂ ಕೂಡ ಗಾಂಜಾ ಘಾಟನ್ನು ಅವಳಿ ನಗರದಿಂದ ಮುಕ್ತ ಮಾಡುವ ಲಕ್ಷಣ ಕಾಣುತ್ತಿಲ್ಲ. ಇನ್ನಾದ್ರೂ ಪೊಲೀಸರ ಇಂತಹ ಕಾರ್ಯಾಚರಣೆಯಿಂದ ಅವಳಿ ನಗರದಲ್ಲಿ ಗಾಂಜಾ ಘಮಲು ಸಂಪೂರ್ಣ ನಿರ್ಮೂಲನೆಯಾಗುತ್ತಾ ಅನ್ನೋದು ಕಾದುನೋಡಬೇಕಿದೆ.