ಕೆಲ ದಿನಗಳ ಹಿಂದೆ ನಡೆದ ಗ್ಯಾಂಗ್ ವಾರ್ ಹಾಗೂ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರ ಆರೋಪಿಗಳನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಕಸಬಾಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು… ಅಫ್ತಾಬ್ ಕರಡಿಗುಡ್ಡ ಹಾಗೂ ಜಾವುರ್ ಬೇಪಾರಿ ನಡುವೆ ಗ್ಯಾಂಗ್ ವಾರ್ ನಡೆದ ಸಂದರ್ಭದಲ್ಲಿ ಜಾವುರ್ ಗೆ ಗಂಭೀರ ಗಾಯಗಳಾಗಿ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಹಲ್ಲೆ ಮಾಡಿ ಪರಾರಿಯಾಗಿದ್ದ ರೌಡಿ ಶೀಟರ್ ಅಫ್ತಾಬ್ ನನ್ನು ಬಂಧನ ಮಾಡಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಕಾಲಿಗೆ ಗುಂಡು ಹೊಡೆಸಿಕೊಂಡಿದ್ದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು.
ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಕಸಬಾಪೇಟ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿಯ ಗಬ್ಬೂರ ಸರ್ಕಲ್ ಬಳಿ ಬಾರಾ ರಪೀಕ ಹಾಗೂ ಜಾಡ ಸಾಧೀಕನನ್ನು ಬಂಧಿಸಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಲ್ಲು ಹಾಗು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಸಿಬ್ಬಂದಿಗಳಾದ ಎಲ್ ವಾಯ್ ಪಾಟೀಲ ಹಾಗೂ ಹಣಮಂತ ಬ್ಯಾಡಗಿ ಅವರ ಚಾಣಾಕ್ಷತೆಯಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಇಬ್ಬರೂ ಸಿಬ್ಬಂಧಿಗಳಿಗೆ ಗಾಯಗಳಾಗಿದ್ದು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಒಟ್ಟಿನಲ್ಲಿ ನೂತನ ಕಮಿಷನರ್ ಎನ್.ಶಶಿಕುಮಾರ ಅವರು ಅಧಿಕಾರ ವಹಿಸಿಕೊಂಡ ಮೇಲೆ ರೌಡಿಗಳಿಗೆ ನಡುಕು ಶುರುವಾಗಿದ್ದು ಅವಳಿ ನಗರ ಬಿಟ್ಟು ಹೋಗುವ ಅನಿವಾರ್ಯ ಕೂಡ ಕಂಡುಬರುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಸ್ವಾಸ್ತ್ಯ ಕಾಪಾಡುವ ವಾತಾವರಣ ಉಂಟಾಗುತ್ತಿದ್ದು, ಹುಬ್ಬಳ್ಳಿ ಧಾರವಾಡ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ. ಹಾಗೆಯೇ ಅವಳಿ ನಗರದ ಎಲ್ಲ ಪೊಲೀಸ ಠಾಣೆಗಳ ಇನ್ಸ್ಪೆಕ್ಟರ್, ಪಿಎಸ್ಐ ಹಾಗೂ ಪೋಲಿಸ್ ಸಿಬ್ಬಂದಿಗಳಿಗೆ ಫ್ರೀ ಹಾಂಡ್ ಸಿಕ್ಕಿರೋದು ಕೂಡ ಸಂತಸ ತಂದಿದೆ. ಇದರಿಂದ ಪ್ರತಿಯೊಂದು ಪೋಲಿಸ್ ಠಾಣಾ ವ್ಯಾಪ್ತಿಗಳಲ್ಲಿ ಬಾಲ ಬಿಚ್ಚುತ್ತಿರುವ ರೌಡಿಗಳನ್ನು ಯಾವುದೇ ಮುಲಾಜು ಹಾಗೂ ಒತ್ತಡಕ್ಕೆ ಮಣಿಯದೇ ಕಾನೂನು ಕ್ರಮ ಜರುಗಿಸುವ ಮೂಲಕ ಹು-ಧಾ ಪೊಲೀಸ್ ಇಲಾಖೆ ಹೊಸದೊಂದು ಇತಿಹಾಸ ಸೃಷ್ಟಿ ಮಾಡಲಿ ಅನ್ನೋದೇ ಸಾರ್ವಜನಿಕರ ಆಶಯವಾಗಿದೆ.