ಹುಬ್ಬಳ್ಳಿ: ಹು-ಧಾ ಸಿಸಿಬಿ ಪೊಲೀಸರು ನಟೋರಿಸ್ ರೌಡಿ, ಶಾರ್ಪ್ ಶೂಟರ್ ಹಾಗೂ ಫ್ರೂಟ್ ಇರ್ಫಾನ್ ಕೊಲೆಯ ಪ್ರಮುಖ ಆರೋಪಿಯಾದ ಬಚ್ಚಾ ಖಾನ್ ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ.
ಹು-ಧಾ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಬಚ್ಚಾಖಾನ್ ಸಹಚರರ ತಂಡವು ನಗರದ ವ್ಯಕ್ತಿಯೋರ್ವನಿಗೆ ನಿರಂತರವಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಖರೀದಿಗಾರರು ಹಾಗೂ ಮಾರಾಟಗಾರರ ನಡುವೆ ವ್ಯವಹಾರಕ್ಕೆ ಸಂಬಂಧಿಸಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಬಚ್ಚಾಖಾನ್ ಸಹಚರರ ತಂಡವು ಜಮೀನು ಮಾರಾಟಗಾರರಿಗೆ ಕೋಟ್ಯಾಂತರ ರೂ. ಕೊಡುವಂತೆ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕರು ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಆರೋಪಿಗಳ ಪತ್ತೆಗಾಗಿ 3 ತಂಡ ರಚಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಸಿಸಿಬಿ ಪೊಲೀಸರು 7 ಜನರನ್ನು ಬಂಧಿಸಿದ್ದು, ಬೆಂಗಳೂರಿನಲ್ಲಿ ಆರೋಪಿ ಬಚ್ಚಾಖಾನ್ ನನ್ನು ವಶಕ್ಕೆ ಪಡೆಯಲಾಗಿದೆ ಈ ಪ್ರಕರಣ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
\” ಮೇರೆ ಉಪ್ಪರ್ ಜೂಟಾ ಕೇಸ ಡಾಲೆ \”
ಬಚ್ಚಾಖಾನ್ ಮೇಲೆ ಧಾರವಾಡದ ಫ್ರೂಟ್ ಇರಫಾನ್ ಕೊಲೆಗೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳ್ಳಾರಿ ಜೈಲಿನಲ್ಲಿದ್ದ ಬಚ್ಚಾಖಾನ್ ಪೆರೋಲ್ ಮೇಲೆ ಹೊರಬಂದಿದ್ದ. ಆತನನ್ನು ಬೆಂಗಳೂರಿನಲ್ಲಿ ಬಂಧಿಸಿ ಕರೆತರಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದರು.