ಹುಬ್ಬಳ್ಳಿ: ಕೇಶ್ವಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಮೇಶಭವನದ ಎದುರುಗಡೆಯಿರುವ ಭುವನೇಶ್ವರಿ ಜ್ಯುವಲರ್ಸ್ ಅಂಗಡಿ ಕಳ್ಳತನದ ಪ್ರಕರಣದಲ್ಲಿ ಐವರ ಅಂತರಾಜ್ಯ ಕಳ್ಳರನ್ನು ಬಂಧಿಸಿದ್ದು, 77 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್ ಗಳನ್ನು ಕೇಶ್ವಾಪೂರ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಪೋಲಿಸ್ ಆಯುಕ್ತ ಎನ್ ಶಶಿಕುಮಾರ್ ಅವರು ಮಾತನಾಡಿ ಕಳ್ಳತನ ಪ್ರಕರಣದಲ್ಲಿ ಮುಂಬೈ ಮೂಲದ ಫರಾನ್ ಶೇಖ್, ಮುಖೇಶ್ ಉರ್ಫ ರಾಜು ಯಾದವ್, ಫಾತಿಮಾ ಶೇಖ್, ಅಪ್ತಾಬ್ ಅಹ್ಮದ್ ಶೇಖ್, ತಲತ್ ಶೇಖ್ ಎಂಬುವರನ್ನು ಬಂಧಿಸಿದ್ದು, ಇನ್ನು ಮೂರು ಪ್ರಮುಖ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಫರಾನ್ ಶೇಖ್ ಮೇಲೆ 15 ಪ್ರಕರಣಗಳು ಇದ್ದು, ಫಾತಿಮಾ ಶೇಖ್ ಮೇಲೆ 2 ಪ್ರಕರಣ ಸೇರಿ ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಎಂದು ತಿಳಿಸಿದ್ದಾರೆ.
ಪ್ರಕರಣ ಬೇಧಿಸಲು ಕೇಶ್ವಾಪೂರ ಪೊಲೀಸ್ ಠಾಣೆ, ಗೋಕುಲ್ ರೋಡ್ ಹಾಗೂ ಕಮರಿಪೇಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು, ಸುಮಾರು ಸಿಸಿ ಟಿವಿ ಪೂಟೇಜ್, ಆರೋಪಿಗಳ ಚಲನವಲನ ಹಾಗೂ ಮಾಹಿತಿ ಕಲೆ ಹಾಕಿ 20 ದಿನಗಳ ಕಾಲ ಮುಂಬೈ ನಗರದಲ್ಲಿ ಇದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
55 ಲಕ್ಷ ಮೌಲ್ಯದ 780 ಗ್ರಾಂ. ಬಂಗಾರ, 17 ಲಕ್ಷ ಮೌಲ್ಯದ 23.3 ಕೆಜಿ ಬೆಳ್ಳಿ ಹಾಗೂ 10 ಸಾವಿರ ನಗದು ಮತ್ತು ಕಳ್ಳತನಕ್ಕೆ ಬಳಸಿದ 5 ಲಕ್ಷ ರೂ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದರು.
ಬಂಗಾರದ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಆಭರಣ ಹಾಗೂ ಅಂಗಡಿ ಸುರಕ್ಷೆತೆಗಾಗಿ ಇತ್ತೀಚಿಗೆ ವಿವಿಧ ತಂತ್ರಜ್ಞಾನ ಹಾಗೂ ವಿವಿಧ ಲಾಕರ್ ಗಳು ಬಂದಿದ್ದು, ಅವುಗಳ ಬಳಕೆ ಮಾಡಿಕೊಂಡು ಎಚ್ಚರವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಎಸಿಪಿಗಳಾದ ಚಿಕ್ಕಮಠ, ಶಿವಪ್ರಕಾಶ್ ನಾಯ್ಕ್, ಕೇಶ್ವಾಪೂರ ಠಾಣೆ ಇನ್ಸ್ಪೆಕ್ಟರ್ ಕೆಎಸ್ ಹಟ್ಟಿ, ಗೋಕುಲ್ ರೋಡ್ ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮಣ್ಣವರ, ಕಮರಿಪೇಟ್ ಇನ್ಸ್ಪೆಕ್ಟರ್ ಮಹಾಂತೇಶ ಹೂಳಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು.
ಜುಲೈ ತಿಂಗಳಲ್ಲಿ 1680 ಗ್ರಾಂ ಬಂಗಾರ, 51 ಕೆಜಿ ಬೆಳ್ಳಿ, ಕಳ್ಳತನವಾಗಿತ್ತು ಈ ಪ್ರಕರಣದಲ್ಲಿ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಮುಂಬೈ ಸೇರಿದಂತೆ ವಿವಿಧ ಕಡೆ ಐವರನ್ನು ಬಂಧಿಸಿ, ಆಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಕಾರ್ಯಕ್ಕೆ ಬಂಗಾರದ ಅಂಗಡಿ ಮಾಲಿಕ ಜಗದೀಶ್ ದೈವಜ್ಞ ಅಭಿನಂದನೆಗಳು ಸಲ್ಲಿಸುತ್ತೇನೆ. ನಮಗೆ ತುಂಬಾ ಸಂತೋಷವಾಗಿದೆ ಎಂದರು.