ಖಾಸಗಿ ಶಾಲಾ ಬಸ್ ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಕಪಗಲ್ ಗ್ರಾಮದ ಹಳ್ಳದ ಬಳಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.
ಮಾನವಿ ಪಟ್ಟಣದ ಲೊಯೊಲೊ ಶಾಲಾ ಬಸ್ ಮಾನವಿ ಕಡೆಗೆ ಹೋಗುತ್ತಿತ್ತು. ಮಾನವಿ ಪಟ್ಟಣದಿಂದ ರಾಯಚೂರು ಕಡೆಗೆ ಸರ್ಕಾರಿ ಬಸ್ ಸಂಚರಿಸುತ್ತಿತ್ತು. ಕಪಗಲ್ ಗ್ರಾಮದ ಹಳ್ಳದ ಬಳಿ ಎರಡೂ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದಿವೆ.
ಶಾಲಾ ಬಸ್ ನಲ್ಲಿದ್ದ 40 ವಿದ್ಯಾರ್ಥಿಗಳ ಪೈಕಿ ನಾಲ್ವರ ಕಾಲುಗಳು ತುಂಡುಗಳಾಗಿದ್ದು, ಗಾಯಾಳು ವಿದ್ಯಾರ್ಥಿಗಳನ್ನು ರಾಯಚೂರಿನ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೋಷಕರೂ ದಾವಿಸಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮಾನವಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.