ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ನೂತನ ಕಮಿಷನರ್ ಆಗಮಿಸಿದ್ದೇ ತಡ ಪೊಲೀಸ್ ಇಲಾಖೆಗೆ ಸಾಕಷ್ಟು ಬೂಸ್ಟ್ ಬಂದಂತಾಗಿದೆ. ದಿನಬೆಳಗಾದ್ರೆ ಕಿತ್ತು ತಿನ್ನುವ ರಾಕ್ಷಸರಂತೆ ಸಾರ್ವಜನಿಕರ ಜೀವನಕ್ಕೆ ಸಾಕಷ್ಟು ಕಿರಿಕಿರಿಯುಂಟು ಮಾಡುವ ರೌಡಿಶೀಟರ್ ಗಳು ತಮ್ಮ ಗತ್ತಲ್ಲಿ ಮೆರೆಯುತ್ತಿದ್ರು. ಆದ್ರೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ ನೂತನ ಕಮಿಷನರ್ ಎನ್.ಶಶಿಕುಮಾರ ಅಧಿಕಾರ ವಹಿಸಿಕೊಂಡಾಗಿಂದ ಅದೆಷ್ಟೋ ರೌಡಿಶೀಟರ್ ಗಳ ಹೆಡೆಮುರಿಕಟ್ಟಿ ಗಾಂಜಾ ಕುಳಗಳ, ಬಡ್ಡಿ, ಚಕ್ರಬಡ್ಡಿ , ಮೀಟರ್ ಬಡ್ಡಿ ದಂಧೆ ನಡೆಸುವ ಕುಳಗಳ ಅಡ್ಡಯನ್ನೇ ಬುಡಸಮೇತ ಕಿತ್ತು ಹಾಕುವ ಮೂಲಕ ಅವಳಿ ನಗರವನ್ನ ಆರೋಗ್ಯಕರ ವಾತಾವರಣವನ್ನಾಗಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈವರೆಗೂ ರೌಡಿಶೀಟರ್ ಗಳ ಹಾಗೂ ಗಾಂಜಾ ಕುಳಗಳನ್ನ ಜೈಲಿಗಟ್ಟುತ್ತಿದ್ದ ಪೊಲೀಸ್ ಇಲಾಖೆ ಇದೀಗ ಅವಳಿನಗರದಲ್ಲಿ ನಡೆಯುತ್ತಿರೋ ಅಕ್ರಮ ಸ್ಪಾಗಳ ದಂಧೆಯನ್ನ ಬುಡಮೇಲು ಮಾಡಲು ಹೊರಟಿದೆ. ಹೌದು, ಅವಳಿನಗರದಲ್ಲಿ ಯಥೇಚ್ಛವಾಗಿ ನಡೆಯುತ್ತಿರೋ ಅಕ್ರಮ ಸ್ಪಾ ದಂಧೆಗೆ ಕಡಿವಾಣ ಹಾಕುವ ಕಟು ನಿರ್ಧಾರ ಕೈಗೊಂಡಿರೋ ಪೊಲೀಸ್ ಇಲಾಖೆ ಇಂದು ವಿದ್ಯಾನಗರ ಪೊಲೀಸರ ಭರ್ಜರಿ ಕಾರ್ಯಾಚರಣೆಯೊಂದಿಗೆ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾಂಸ ದಂಧೆ ನಡೆಸುತ್ತಿದ್ದ ಯುನಿಕ್ ಸ್ಪಾ & ವೆಲ್ನೆಸ್ ಮೇಲೆ ದಾಳಿ ನಡೆಸಿದೆ.
ಖಚಿತ ಮಾಹಿತಿ ಮೇರೆಗೆ ಯುನಿಕ್ ಸ್ಪಾ ಮೇಲೆ ಏಕಾಏಕಿ ದಾಳಿ ನಡೆಸಿದ ವಿದ್ಯಾನಗರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಜಯಂತ್ ಗೌಳಿ ನೇತೃತ್ವದಲ್ಲಿ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ಹಾಗೂ ಸಿಬ್ಬಂಧಿಗಳಿಂದ ದಾಳಿ ಮಾಡಲಾಗಿದೆ. ತುಳಸೀದಾಸ್ ಬೋರಕರ್ ಎಂಬುವವರ ಒಡೆತನಕ್ಕೆ ಸೇರಿದ ಸ್ಪಾ ಮೇಲೆ ದಾಳಿ ಮಾಡಿದ ಪೊಲೀಸರಿಗೆ ದಾಳಿ ವೇಳೆ ಸ್ಪಾದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದ ಅಂಶ ಬೆಳಕಿಗೆ ಬಂದಿದೆ.
ಇನ್ನು ಸ್ಪಾ ಮೇಲೆ ದಾಳಿ ನಡೆಸಿ ಇಬ್ಬರು ಹೊರ ರಾಜ್ಯ ಯುವತಿಯರ ರಕ್ಷಣೆ ಮಾಡುವಲ್ಲಿ ವಿದ್ಯಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ದೆಹಲಿ ಹಾಗೂ ಗುಜರಾತ್ ಮೂಲದ ಇಬ್ಬರು ಯುವತಿಯರನ್ನ ರಕ್ಷಣೆ ಮಾಡಿದ್ದು , ಈ ಯುವತಿಯರನ್ನ ಬಳಸಿ ಸ್ಪಾ ದಂಧೆಕೋರರು ಮಾಂಸ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.
ಒಟ್ಟಿನಲ್ಲಿ ಮಾಂಸ ದಂಧೆ ನಡೆಸುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ಸ್ಪಾ ಮೇಲೆ ದಾಳಿ ನಡೆಸಿ ದಂಧೆಕೋರರ ಹೆಡೆಮುರಿಕಟ್ಟಿದ ಪೊಲೀಸರ ಈ ಕಾರ್ಯಕ್ಕೆ ಇಲಾಖೆಯಲ್ಲಷ್ಟೇ ಅಲ್ದೇ ಸಾರ್ವಜನಿಕ ವಲಯದಲ್ಲೂ ಕೂಡ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅವಳಿ ನಗರದಲ್ಲಿ ಎಗ್ಗಿಲ್ಲದೇ ಅಕ್ರಮವಾಗಿ ನಡೆಸಲಾಗುತ್ತಿರೋ ಇನ್ನೂ ಹತ್ತಾರು ಸ್ಪಾಗಳ ಮಾಲೀಕರಿಗೆ ಮೈನಡುಕ ಹುಟ್ಟಿಕೊಂಡಂತಾಗಿದೆ.
ಅದೇನೇ ಇರ್ಲಿ ಅಕ್ರಮವಾಗಿ ಸ್ಪಾ ದಂಧೆ ನಡೆಸುವ ಮೂಲಕ ಯುವ ಸಮೂಹವನ್ನ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿರೋ ಮಾಂಸದಂಧೆಗೆ ಇನ್ನಾದ್ರೂ ಸಂಪೂರ್ಣ ಬ್ರೇಕ್ ಬೀಳುತ್ತಾ ಅನ್ನೋದು ಕಾದುನೋಡಬೇಕಿದೆ.