ಹುಬ್ಬಳ್ಳಿ: ಗಣೇಶ ವಿಸರ್ಜನೆಯನ್ನು ಕ್ಷಣವನ್ನು ಗುರಿಯಾಗಿಸಿಕೊಂಡು ಮೊಬೈಲ್ ದೋಚುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಂಗಾಧರ ನಗರದ ವೆಂಕಟೇಶ ಕೊರವರ್, ಮಂಟೂರ ರಸ್ತೆಯ ಸಿದ್ದಾರೋಢ ದೊಡ್ಡಮನಿ ಬಂಧಿತ ಆರೋಪಿಗಳಾಗಿದ್ದು, ಇವರು ನಗರದಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಹಚ್ಚುತ್ತಿದ್ದ ಡಿಜೆಗಳನ್ನು ಗುರಿಯಾಗಿಸಿಕೊಂಡು ನೃತ್ಯ ಮಾಡುವವರ ಗಮನ ಬೇರೆಡೆ ಸೆಳೆದು ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ್ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿ, ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತರಿಂದ ವಿವಿಧ ಕಂಪನಿಯ 22 ಮೊಬೈಲ್, ಒಂದು ಬೈಕ್ ವಶಕ್ಕೆ ಪಡೆದಿದ್ದು, ಒಟ್ಟು ಮೌಲ್ಯ 3.20 ಲಕ್ಷ ರೂ ಎಂದು ಅಂದಾಜಿಸಲಾಗಿದೆ.
ಇನ್ನು ವಿಚಾರಣೆ ವೇಳೆ ಆರೋಪಿತರು ಮರಾಠ ಗಲ್ಲಿ ಹಾಗೂ ಶಿಗ್ಗಾಂವ್ ಗಣೇಶ ವಿಸರ್ಜನೆ ಮೆರವಣಿಗೆ ವೇಳೆಯಲ್ಲಿ ಕದ್ದಿರುವುದಾಗಿ ಬಾಯಿ ಬಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.