ಹುಬ್ಬಳ್ಳಿ: ನಗರದ ಹೊರವಲಯದ ಗದಗ ರಸ್ತೆಯ ವರ್ತುಲ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ದರೋಡೆಕೋರರ ಗ್ಯಾಂಗ್ ನನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಂಗಾಧರನಗರದ ಭೀಮರಾವ್ ತಾವರಗೊಪ್ಪ, ರವಿ ಗೋಕಾಕ್, ಕೆ.ಬಿ. ನಗರದ ದೀಪಕ ನರಗುಂದ, ಶ್ರೀನಿವಾಸ ವೀರಾಪುರ, ಸೋನಿಯಾಗಾಂಧಿ ನಗರದ ಶಶಿಕುಮಾರ್ ಸಾತಪತಿ, ಗೋಪನಕೊಪ್ಪದ ನಾಗರಾಜ ಬಳ್ಳಾರಿ ಬಂಧಿತ ಆರೋಪಿಗಳು. ಅವರಿಂದ ಪೊಲೀಸರು 4,100 ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಆಟೊ, ಎರಡು ದ್ವಿಚಕ್ರ ವಾಹನ, ಚಾಕು ಹಾಗೂ ಖಾರದ ಪುಡಿ ಪ್ಯಾಕೆಟ್ ವಶಪಡಿಸಿಕೊಂಡಿದ್ದಾರೆ.
ಹೊರವಲಯದ ವರ್ತುಲ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ಹಾಗೂ ಲಾರಿಗಳನ್ನು ಆರೋಪಿಗಳು ಅಡ್ಡಗಟ್ಟಿ ಬೆದರಿಸುತ್ತಿದ್ದರು. ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಹಲ್ಲೆ ಮಾಡಿ ಹಣ, ಚಿನ್ನಾಭರಣ ಸೇರಿದಂತೆ ಅತ್ಯಮೂಲ್ಯ ವಸ್ತುಗಳನ್ನು ದೋಚುತ್ತಿದ್ದರು. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಆರೋಪಿಗಳ ಪತ್ತೆಗೆ ಇನ್‍ಸ್ಪೆಕ್ಟರ್ ಎಸ್.ಆರ್. ನಾಯಕ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಪಿಎಸ್‍ಐ ರವಿ ವಡ್ಡರ, ಎಎಸ್‍ಐ ಟಿ.ಎನ್. ಸವದತ್ತಿ, ಸಿಬ್ಬಂದಿಯಾದ ಪಿ.ಜಿ. ಪುರಾಣಿಕಮಠ, ಎನ್.ಐ. ನಿಲಗಾರ್, ಪಿ.ಎಫ್.ಅಂಬಿಗೇರ್, ಆರ್.ಎಸ್.ಹರ್ಕಿ, ರಮೇಶ ಹಿತ್ತಲಮನಿ, ಹನುಮಂತ ಕರಗಾವಿ, ಸೋಮು ಮೇಟಿ, ಬಸವರಾಜ ಗಳಗಿ, ಗುಡ್ಡಪ್ಪ ಒಗ್ಗಣ್ಣವರ, ಬಸು ಗೌಡರ, ಹನುಮಂತ ಆಲೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಇವರುಗಳ ಕಾರ್ಯವೈಖರಿಯನ್ನು ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಅವರು ಶ್ಲಾಘಿಸಿದ್ದಾರೆ.