ಹುಬ್ಬಳ್ಳಿ: ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ, ಮನೆ ಕಳ್ಳತನ ಮಾಡುತ್ತಿದ್ದ ನಟೋರಿಯಸ್ ಮನೆಗಳ್ಳಿ ಹಾಗೂ ಕಳ್ಳತನಕ್ಕೆ ಸಹಕರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸೆಟಲ್ಮೆಂಟ್ ಗಂಗಾಧರನಗರದ ನಿವಾಸಿ ರತ್ನವ್ವ ಬಾಳಿಮೇಡ್ (45), ಕುಸುಗಲ್ ಗ್ರಾಮದ ನಿವಾಸಿ ಮುಕ್ತುಂಸಾಬ್ ಕುಂಬಿ (27) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 2.50 ಲಕ್ಷ ರೂ ಮೌಲ್ಯದ 50 ಗ್ರಾಂ ತೂಕದ 4 ಬಂಗಾರದ ಬಳೆಗಳು, 50 ಸಾವಿರ ಮೌಲ್ಯದ 10 ಗ್ರಾಂ ತೂಕದ ಬಂಗಾರದ ಚೈನು, 50 ಸಾವಿರ ರೂ ಮೌಲ್ಯದ 6 ಜೊತೆ 12 ಕಿವಿಯೋಲೆ, 1.50 ಲಕ್ಷ ರೂ ಮೌಲ್ಯದ ಬಂಗಾರದ ಪದಕ ಮತ್ತು ಎರಡು ತೊಡೆಗಳು, ಇತರೆ 10 ಗ್ರಾಂ ಬೆಳ್ಳಿ ಆಭರಣ, ಬಳೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 5.33 ಲಕ್ಷ ರೂ ಎಂದು ಅಂದಾಜಿಸಲಾಗಿದೆ.
ಬಂಧಿತ ಮಹಿಳೆ ಸೆ.16 ರಂದು ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯನಗರದ ಮನೆ ನಂಬರ್ 113 ರಲ್ಲಿ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳತನ ಮಾಡಲಾಗಿತ್ತು. ಮನೆ ಮಾಲಕಿ ಸುಜಾತಾ ದೂರು ದಾಖಲಿಸಿದ್ದರು.
ಈ ದೂರಿನ ಅನ್ವಯ ಅಶೋಕ ನಗರ ಠಾಣೆಯ ಪಿಐ ಕಿರಣ್ ತಾವರಗಿ, ಪಿಎಸ್ಐ ಮಂಜುನಾಥ ಟಿ.ಎಮ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಶೋಕ್ ನಗರ ಠಾಣೆಯ ಕ್ರೈಂ ಸಿಬ್ಬಂದಿ ಎಸ್.ಹೆಚ್.ಪಾಟೀಲ್, ಯಶವಂತ್.ಬಿ.ಮೊರಬ್, ರಾಜೇಂದ್ರ ಸಕ್ರಪಗೋಳ, ವಿರೇಶ ಮಹಾಜನಶೆಟ್ಟರ್, ಶಂಭು ಇರೇಶನವರ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.