ಹುಬ್ಬಳ್ಳಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ಮೂವರು ಸ್ನೇಹಿತರ ಗುಂಪಿನಲ್ಲಿ ಓರ್ವ ಕಾಣೆಯಾಗಿ, ಇಬ್ಬರು ವಾಪಾಸಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಸದ್ಯ ಕಾಣೆಯಾಗಿದ್ದ ಹನುಮಂತ ಶನಿವಾರ ರಾತ್ರಿ ತಮ್ಮ ನಿವಾಸಕ್ಕೆ ವಾಪಾಸ್ ಆಗಿದ್ದಾನೆಂಬ ಸಂಗತಿ ತಿಳಿದುಬಂದಿದೆ.
ಸೆ.22 ರಂದು ಹಳೇಹುಬ್ಬಳ್ಳಿಯ ಜಂಗ್ಲಿಪೇಟೆಯ ವಡ್ಡರ ಓಣಿಯ ನಿವಾಸಿಗಳಾದ ಹನುಮಂತ ಮಂಜಲಕರ (31) ತನ್ನ ಸ್ನೇಹಿತರಾದ ಶಿವಾಜಿ ಮಣ್ಣವಡ್ಡರ, ಗಣೇಶ ಬೆಡಸೂರ ಜೊತೆಗೂಡಿ ತಿರುಪತಿಗೆ ಹೋಗಿದ್ದರು. ಆದರೆ ಸೆ.27 ರಂದು ಮೂರು ಜನರಲ್ಲಿ ಶಿವಾಜಿ ಮತ್ತು ಗಣೇಶ ಮಾತ್ರ ವಾಪಾಸ್ ಬಂದಿದ್ದರು.
ಈ ವೇಳೆ ಹನುಮಂತ ಕಾಣೆಯಾಗಿರುವ ಕುರಿತು ಶಿವಾಜಿ ಮತ್ತು ಗಣೇಶ ತಿಳಿಸಿದ್ದರು. ಇದರಿಂದ ಗಾಬರಿಗೊಂಡ ಹನುಮಂತನ ಕುಟುಂಬಸ್ಥರು ಸೆ.27 ರಂದು ಶಿವಾಜಿ ಮಣ್ಣವಡ್ಡರ ಎಂಬಾತನಿಗೆ ಹನುಮಂತನನ್ನು ಕರೆದುಕೊಂಡು ಬರುವಂತೆ ಒತ್ತಾಯಿಸಿದ್ದಾರೆ.
ಇದರಿಂದ ಗಾಬರಿಗೊಂಡಿದ್ದ ಶಿವಾಜಿ ಏಕಾಏಕಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು. ಇದರಿಂದ ತಿರುಪತಿ ಪ್ರವಾಸಕ್ಕೆ ಹೋಗಿದ್ದ ಪ್ರಕರಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಇತ್ತ ಶಿವಾಜಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಂದೆಡೆ ಹನುಮಂತ ಕಾಣೆಯಾಗಿದ್ದು ಇವೆಲ್ಲವನ್ನೂ ನೋಡಿ ಹನುಮಂತ ಮೃತಪಟ್ಟಿದ್ದಾನಾ? ಅಥವಾ ಕಾಣೆಯಾಗಿದ್ದಾನಾ? ಎಂಬ ಸಾಕಷ್ಟು ಪ್ರಶ್ನೆಗಳು ಕಾಡಿದ್ದವು.
ಈ ನಡುವೆ ಹನುಮಂತ ಮಂಜಲಕರ ಅವರ ಕುಟುಂಬಸ್ಥರು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆಯ ಪ್ರಕರಣವನ್ನು ದಾಖಲಿಸಿದ್ದರು.
ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಸಬಾಪೇಟೆ ಪೊಲೀಸರು ತನಿಖೆ ಚುರುಕುಗೊಳಿದ್ದರು. ಈ ನಡುವೆ ಹನುಮಂತ ಮಂಜಲಕರ ಶನಿವಾರ ರಾತ್ರಿ ವಾಪಾಸ್ ನಿವಾಸಕ್ಕೆ ಆಗಮಿಸಿದ್ದಾನೆಂದು ತಿಳಿದುಬಂದಿದೆ.
ಇನ್ನು ರಕ್ತಸಂಬಂಧಕ್ಕಿಂತ ಹೆಚ್ಚು ಇದ್ದ ಸ್ನೇಹಿತರ ಬದುಕಿನಲ್ಲಿ ತಿರುಪತಿ ಪ್ರವಾಸ ಬಿರುಗಾಳಿ ಎಬ್ಬಿಸಿದ್ದು, ಶಿವಾಜಿ ತನ್ನದಲ್ಲದ ತಪ್ಪಿಗೆ ಜೀವವನ್ನೇ ಕಳೆದುಕೊಂಡಿದ್ದಾನೆ. ಮತ್ತೊಂದೆಡೆ ಹನುಮಂತ ವಾಪಾಸ್ ಮನೆಗೆ ಬಂದಿದ್ದು, ಪೊಲೀಸರು ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಿ ಮಾಹಿತಿ ನೀಡಬೇಕಿದೆ.