ಹುಬ್ಬಳ್ಳಿ: ಊರಿಗೆ ಹೋಗುವ ಮುನ್ನ ನೆರೆಹೊರೆಯವರೆಗೆ ನಿಮ್ಮ ಮನೆಯ ಕೀ ಕೊಡುತ್ತೀರಾ! ಕೊಡುವ ಮುನ್ನಾ ಇರಲಿ ಎಚ್ಚರ! ಏನಿದು ಈಗಿನ ಕಾಲದಲ್ಲಿ ನೆರೆಹೊರೆಯವರನ್ನು ನಂಬಲಾರದ ಸ್ಥಿತಿ ಬಂದೊದಗಿದೆಯಾ? ಎಂಬ ಪ್ರಶ್ನೆ ಮೂಡುವುದು ಸಹಜ, ಅಂತಹದೊಂದು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು… ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಚಿನ್ನಾಭರಣ ಹಾಗೂ ನಗದು ಸೇರಿ ಕಳ್ಳತನವಾಗಿದ್ದು, ಎದುರಿನ ಮನೆಯವರೇ ಕಳ್ಳತನ ಮಾಡಿದ್ದಾರೆಂದು ಆರೋಪಿಸಿದ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಳೇ ಹುಬ್ಬಳ್ಳಿ ನೇಕಾರನಗರದ ಗುರುಸಿದ್ದೇಶ್ವರ ಕಾಲೋನಿಯ ನಿವಾಸಿ ಅಶ್ವಿನಿ ಶ್ರೀಧರ ಬಗಾಡೆ ಎಂಬುವವರ ಮನೆ ಕಳ್ಳತನವಾಗಿದೆ. ಇದೆ ತಿಂಗಳು ದಿನಾಂಕ 13 ರಂದು ಬೆಳಗಾವಿಗೆ ಹೋಗುವುದಾಗಿ ಹೇಳಿ ಮನೆಯ ಕೀಲಿಯನ್ನು ಎದುರು ಮನೆಯವರಾದ ಪವಿತ್ರಾ ಲಕ್ಕಣ್ಣವರಿಗೆ ಕೊಟ್ಟಿದ್ದಾರೆ. ಊರಿನಿಂದ ಬಂದು ನೋಡಿದ್ರೆ ಮನೆಯಲ್ಲಿದ್ದ 15.5 ಮಿ.ಗ್ರಾಂ ಚಿನ್ನ, 145 ಗ್ರಾಂ ಬೆಳ್ಳಿ ಹಾಗೂ ಐವತ್ತು ಸಾವಿರ ನಗದು ಸೇರಿ ಒಟ್ಟು 1,31,250 ರೂಪಾಯಿ ಕಳ್ಳತನವಾಗಿದೆ, ಇದನ್ನು ಎದುರು ಮನೆಯವರೇ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ದಿನಾಂಕ 19 ರಂದು ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.
ಏನೇ ಆಗಲಿ ಮನೆ ಕೀಲಿ ಹಾಕಿಕೊಂಡು ಊರಿಗೆ ಹೋಗುವ ಮುನ್ನ, ಮನೆ ಕೀಲಿಯನ್ನು ನೆರೆಹೊರೆಯವರಿಗೆ ಕೊಡುವ ಬದಲು, ನಿಮ್ಮ ವ್ಯಾಪ್ತಿಗೆ ಸಂಬಂಧಪಟ್ಟ ಪೋಲಿಸ್ ಠಾಣೆಗೆ ಮಾಹಿತಿ ನೀಡಿದರೆ ಅಲ್ಲಿ ಕಾರ್ಯ ನಿರ್ವಹಿಸುವ ಪೋಲಿಸ್ ಬೀಟ್ ನಿಗಾವಹಿಸುತ್ತದೆ. ಪೋಲಿಸ್ ಇಲಾಖೆಯೂ ಸಾಕಷ್ಟು ಬಾರಿ ಮನೆ ಕಳ್ಳತನ ಆಗದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು ಕೂಡ, ಜನರು ನಿರ್ಲಕ್ಷ ವಹಿಸುವುದರಿಂದ ಇಂತಹ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸ.