ಹುಬ್ಬಳ್ಳಿ: ಜನವಸತಿ ಪ್ರದೇಶದಲ್ಲಿ ಹೊಸದಾಗಿ ಮದ್ಯದಂಗಡಿ ಆರಂಭವಾಗುವುದಕ್ಕೆ ಸ್ಥಳೀಯರು ವಿರೋಧವನ್ನು ವ್ಯಕ್ತಪಡಿಸಿ ಎಣ್ಣೆ ಅಂಗಡಿಗೆ ಬೀಗ ಹಾಕಿರುವ ಘಟನೆ ನವನಗರದಲ್ಲಿ ನಡೆದಿದೆ. ಅಜಯ್ ನೆವಲಡಿ ಎಂಬಾತರ ಮಾಲೀಕತ್ವದ ಮದ್ಯದ ಅಂಗಡಿಗೆ ಬೀಗ ಹಾಕಲಾಗಿದೆ.

ಮೊದಲೇ ಜನವಸತಿ ಪ್ರದೇಶದಲ್ಲಿಯೇ ಮದ್ಯದ ಅಂಗಡಿ ಇದ್ದು, ನಿತ್ಯ ನೂರಾರು ಜನ ಬಂದು ಇಲ್ಲಿ ಮದ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಾರೆ. ಹಗಲು-ರಾತ್ರಿ ಎನ್ನದೇ ಬಾರ್ ತೆಗೆಯುವುದರಿಂದ ಕುಡುಕರ ಹಾವಳಿ ಹೆಚ್ಚಾಗುತ್ತದೆ. ಹೀಗಾಗಿ ಈ ಭಾಗದಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಮುಜುಗರ ಪಡುವಂತ ಸ್ಥಿತಿ ಹಾಗೂ ಹೆಣ್ಣು ಮಕ್ಕಳು ಹೊರ ಬರದಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯರು ಬುಧವಾರ ಏಕಾಏಕಿ ಬಾರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ರಾತ್ರೋರಾತ್ರಿ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ವಿಷಯ ತಿಳಿದು ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಈ ವೇಳೆ ಸಾರ್ವಜನಿಕರ ಅಹವಾಲು ಕೇಳಿದ್ದಾರೆ. ಬಳಿಕ ಅಬಕಾರಿ ಡಿಸಿಪಿ ರಮೇಶ ಹಾಗೂ ವ್ಯವಸ್ಥಾಪಕ ಮಠಪತಿ ಅವರ ನೇತೃತ್ವದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಮಾವಿನಕಟ್ಟಿ ಹಾಗೂ ನವನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಮೇಶ್ ಪಾಟೀಲ್ ಅವರ ಉಪಸ್ಥಿತಿಯಲ್ಲಿ ಡಿ ಲಿಕ್ಕರ್ ಹೌಸ್’ಗೆ ಬೀಗ ಹಾಕಿ ಸ್ಥಳಾಂತರ ಮಾಡುವ ಕುರಿತ ನೋಟಿಸ್ ಹಚ್ಚಲಾಗಿದೆ.