ಅಕ್ರಮ ಮದ್ಯ ಮಾರಾಟದ ಬಗ್ಗೆ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವನನ್ನು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಲ್ಲದೇ, ಕರೆಂಟ್ ನಿಂದ ಶಾಕ್ ಕೊಟ್ಟು ಅಮಾನುಷವಾಗಿ ಕೊಲೆಗೈದ ಘಟನೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಊರಲ್ಲೇ ನಡೆದಿದೆ.
ಬಾಗಲಕೋಟೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವೆಂಕರೆಡ್ಡಿ ಶೇಷಪ್ಪನವರ (40) ಎಂಬಾತನನ್ನು ಐದು ಜನರ ಗ್ಯಾಂಗ್ ಸೇರಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರ್ವತಗೌಡ ಮುದಿಗೌಡ್ರ, ಪುಟ್ಟಪ್ಪ ಮುದಿಗೌಡ್ರ, ಸಿದ್ದಪ್ಪ ನೀಲಗೌಡ, ಹನುಮಂತ ನೀಲರ್, ಪತ್ನಿ ಶೈಲಾ ನೀಲರ್ ಎಂಬ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಡಿ.21ರಂದು ಅಕ್ರಮ ಮದ್ಯ ಮಾರಾಟ ಮಾಡೋದನ್ನು ಮೃತ ವೆಂಕಟರೆಡ್ಡಿ ಪ್ರಶ್ನಿಸಿದ್ದಕ್ಕೆ ಅವರನ್ನು ಕಟ್ಟಿಗೆಯಿಂದ ಥಳಿಸಿ, ಕರೆಂಟ್ ಶಾಕ್ ನೀಡಿರುವ ಆರೋಪವಿದೆ. ಬಳಿಕ ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ವೆಂಕಟ್ಟರೆಡ್ಡಿ ಅಸುನೀಗಿದ್ದಾರೆ.

ಹತ್ಯೆಯಾದ ವ್ಯಕ್ತಿಯ ಶವದ ವಾಹನವನ್ನು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪಟ್ಟಣದ ಬಾದಾಮಿ ಕ್ರಾಸ್ ಬಳಿ ನಿಲ್ಲಿಸಿ ಒಂದು ತಾಸು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕೊಲೆ ಆರೋಪಿಗಳಿಗೆ ವಿರುದ್ಧ ಕಠಿಣ ಕ್ರಮಕೈಗೊಂಡು ಶಿಕ್ಷೆ ನೀಡಬೇಕು ಮತ್ತು ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಹಾಗೂ ಮಹಿಳಾ ಸಂಘಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ, ‘ಘಟನೆ ಸಂಬಂದಿಸಿದಂತೆ ಈಗಾಗಲೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದವರನ್ನು ಆದಷ್ಟು ಬೇಗನೆ ಬಂಧಿಸಿ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಹಾಗೂ ತಪ್ಪಿತಸ್ಥ ಇಲಾಖೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.