ಹುಬ್ಬಳ್ಳಿಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒಪ್ಪದಿದ್ದಾಗ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋನಿಯಾಗಾಂಧಿ ನಗರದ ನಿವಾಸಿಯಾದ ಕುಮಾರ್ ಬೆಟಗೇರಿ (57) ಎಂಬಾತ ಮೃತ ವ್ಯಕ್ತಿಯಾದ್ರೆ, ದೇವಾಂಗಪೇಟೆ ನಿವಾಸಿಯಾದ ಗೌಸ್ ಮೊಹಮ್ಮದ್ ನದಾಫ್ (40) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಮಹಮ್ಮದ್ ಗೌಸ್ ಡಿ.22 ರಂದು ಸುಳ್ಳ ರೋಡ್ ಇಂದ್ರಪ್ರಸ್ಥ ಲೇಔಟ್ ನಲ್ಲಿ ಕುಮಾರ್ ಬೆಟಗೇರಿ ಕೊಲೆ ಮಾಡಿ ಪರಾರಿಯಾಗಿದ್ದು, ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಯನ್ನು ಪತ್ತೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಉತ್ತರ ಉಪವಿಭಾಗದ ಎಸಿಪಿ ಶಿವಪ್ರಕಾಶ್ ನಾಯಕ್ ರವರ ನೇತೃತ್ವದಲ್ಲಿ ಕೇಶ್ವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೆ ಎಸ್ ಹಟ್ಟಿ ಮತ್ತವರ ಠಾಣೆಯ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಈ ತಂಡವು ಪ್ರಕರಣದ ಆರೋಪಿಯಾದ ದೇವಾಂಗಪೇಟೆಯ ಗೌಸ್ ಮೊಹಮ್ಮದ್ ನದಾಫ್ ಎಂಬಾತನನ್ನು ಬಂಧಿಸಿ, ಕೃತಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು ಮೃತನಿಂದ ಸುಲಿಗೆ ಮಾಡಿದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೇ ನೀಡಿದ ಕಮಿಷನರ್ ಎನ್ ಶಶಿಕುಮಾರ್,ಈ ಕೊಲೆ ಮಾಡಿದ್ದು ಯಾರು ಎಂಬ ಸುಳಿವು ಇರಲಿಲ್ಲ. ಕೆಲ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಾಗ ಆರೋಪಿ ಪತ್ತೆಯಾಗಿದ್ದಾನೆ. ಮೊದ ಮೊದಲು ಆರೋಪಿ ಹಣಕಾಸು ವ್ಯವಹಾರಕ್ಕೆ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ವಿಚಾರಣೆ ತೀವ್ರಗೊಳಿಸಿದಾಗ ಇವರಿಬ್ಬರ ನಡುವೆ ಅನೈಸರ್ಗಿಕ ಲೈಂಗಿಕ ಚಟುವಟಿಕೆ ನಡೆಯುತ್ತಿತ್ತು ಎಂದು ಬಾಯಿಬಿಟ್ಟಿದ್ದಾನೆ.
ಕೊಲೆಯಾದ ದಿನವೂ ಕೂಡ ಮೃತ ವ್ಯಕ್ತಿ ಇದಕ್ಕೆ ನಿರಾಕರಿಸಿದಾಗ ಕೊಲೆ ಮಾಡಿ ಆತನ ಬಳಿ ಇದ್ದ ಒಂದು ಸಾವಿರ ರೂ.ಹಣ ಕಿತ್ತುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅದಕ್ಕೆ ಪೂರಕವಾದ ವೈದ್ಯಕೀಯ ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಂತರ ಅದೆಲ್ಲ ತಿಳಿದು ಬರಲಿದೆ ಎಂದರು.