ಹುಬ್ಬಳ್ಳಿ: ಚರಂಡಿ ದಾಟುವ ವೇಳೆ ಆಯತಪ್ಪಿ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಹೆಗ್ಗೇರಿ ಬಳಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿ ಅರವಿಂದ್ ನಗರದ ನಿವಾಸಿ ಶಂಕ್ರಪ್ಪ ಗಬ್ಬೂರು (58) ಎಂದು ಗುರುತಿಸಲಾಗಿದ್ದು, ಹೆಗ್ಗೇರಿ ರಸ್ತೆಯ ಆಟದ ಮೈದಾನದ ಹತ್ತಿರ ಇರುವ ಚರಂಡಿ ಬಳಿ ಈ ಘಟನೆ ನಡೆದಿದೆ.

ನಿನ್ನೆ ರಾತ್ರಿ ವೇಳೆ ರಸ್ತೆ ಬದಿಯಲ್ಲಿರುವ ಚರಂಡಿ ದಾಟುವ ವೇಳೆ ಶಂಕ್ರಪ್ಪ ಆಯ ತಪ್ಪಿ ಬಿದ್ದಿರುವುದಾಗಿ ಶಂಕೆ ವ್ಯಕ್ತವಾಗಿದೆ. ಇನ್ನು ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಾನವೀಯತೆ ಮೆರೆದ ಪೊಲೀಸರು :
ನಿನ್ನೆ ರಾತ್ರಿ ಶಂಕ್ರಪ್ಪ ಗಬ್ಬೂರ ಮೈದಾನದ ರಸ್ತೆ ಮೂಲಕ ತನ್ನ ಮನೆಗೆ ತೆರಳುವ ಸಂದರ್ಭ ಚರಂಡಿದಾಟುವ ವೇಳೆ ಏಕಾಏಕಿ ಆಯತಪ್ಪಿ ಬಿದ್ದಿದ್ದಾನೆ. ಈ ವೇಳೆ ಯಾರೂ ಇಲ್ಲದ ಕಾರಣ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ಬೇರೆ ಮನೆ ಮಾಡಿಕೊಂಡು ವಾಸವಿದ್ದ ಶಂಕ್ರಪ್ಪ. ಇನ್ನು ಬೆಳಗಿನ ಜಾವ ಕುಟುಂಬಸ್ಥರಿಗೆ ಸಾವಿನ ಸುದ್ದಿ ತಿಳಿಸಿದರೂ ಸಂಬಂಧಿಕರಾಗಲಿ ವ್ಯಕ್ತಿಯ ಮಗನಾಗಲಿ ಯಾರೂ ಮೃತ ದೇಹದ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳದ ಹಿನ್ನೆಲೆ ಪೊಲೀಸ್ ಇನ್ಸಪೆಕ್ಟರ್ ಅಲಿ ಶೇಖ್, ಪಿಎಸ್ ಐ ಬಿ.ಸಾತಣ್ಣವರ್ ಸೇರಿದಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಸಿಬ್ಬಂಧಿ ಅಂಬ್ಯುಲೆನ್ಸ್ ಕರೆಯಿಸಿ ಮೃತ ದೇಹವನ್ನ ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.