ಹುಬ್ಬಳ್ಳಿ: ಹಣಕಾಸಿನ ವ್ಯವಹಾರದಲ್ಲಿ ಅದೆಷ್ಟೋ ಜನ ಸ್ನೇಹಿತರು, ವ್ಯವಹಾರಸ್ಥರು, ಉದ್ಯಮಿಗಳ ನಡುವೆ ಕಲಹ, ಹಲ್ಲೆಯಂತಹ ಪ್ರಕರಣಗಳು ನಡೆದಿರೋದನ್ನ ನೋಡಿದ್ದೇವೆ. ಆದ್ರೆ ಅದೇ ಹಣಕಾಸಿನ ವಿಚಾರವಾಗಿ ತಮ್ಮನ ಮಗನಿಂದಲೇ ಅಣ್ಣನ ಕುಟುಂಬಸ್ಥರ ಮೇಲೆ ಸ್ಕೆಚ್ ಹಾಕಿ ಹಲ್ಲೆ ನಡೆಸಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಸಿಬಿಟಿ ಹತ್ತಿರದ ಸುಳ್ಳದ ಹೈಟ್ಸ್ ಬಿಲ್ಡಿಂಗ್ ನಲ್ಲಿ ಮನೋಹರ ಸುಳ್ಳದ ಎಂಬ ದಂಪತಿಗಳು ವಾಸವಿದ್ದ ಮನೆಗೆ ನುಗ್ಗಿದ ನಾಲ್ಕು ಜನ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗಿ ಕೊಲೆ ಮಾಡಲೂ ಸಹ ಯತ್ನಿಸಿದ್ದಾರೆಂದು ಹಲ್ಲೆಗೊಳಗಾದ ಸುಳ್ಳದ ದಂಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಣಕಾಸಿನ ವಿಚಾರವಾಗಿ ದಂಪತಿಗಳ ಮುಖಕ್ಕೆ ಖಾರದಪುಡಿ ಎರಚಿ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪವನ ಸುಳ್ಳದ, ಮಂಜುನಾಥ ಪೂಜಾರಿ, ರಾಕೇಶ ಮಾನೆ, ಆನಂದ ಬಾಕಳೆ, ಚಂದ್ರಶೇಖರ ನಾಟೇಕರ, ತಬರೇಜ ಚೌಧರಿ, ಪವನ, ಅಜೀತ್ ಎಂಬುವವರ ಮೇಲೆ ಮನೋಹರ ದೂರು ದಾಖಲಿಸಿದ್ದಾರೆ.
ಎಸಿಪಿ ಉಮೇಶ್ ಚಿಕ್ಕಮಠ ಅವರ ಮಾರ್ಗದರ್ಶನದಲ್ಲಿ ದೂರು ದಾಖಲಿಸಿಕೊಂಡ ಶಹರ ಠಾಣೆಯ ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್, ಪಿಎಸ್ಐಗಳಾದ ವಿನೋದ್ ದೊಡ್ಡಲಿಂಗಪ್ಪನವರ್, ಆರ್ ಮಾರುತಿ ನೇತೃತ್ವದ ತಂಡಡಲ್ಲಿ ಜಗದೀಶ್ ಮ್ಯಾಗಿನಮನಿ, ಸುಧಾಕರ್ ನೇಸುರ್, ವಿಠ್ಠಲ್ ಭೋವಿ, ಎಸ್ ಜಿ ಹೊಸಮನಿ, ರುದ್ರಪ್ಪ ಹೊರಟ್ಟಿ, ರಾಮರಾವ್ ರಾಥೋಡ್, ಕನಕಪ್ಪ ರಘಾನಿ, ವೈ ಎಫ್ ದಾಸನ್ನವರ್, ಯಲ್ಲಪ್ಪ ಶೆಂಡ್ಗೆ ಇವರುಗಳು ಕಾರ್ಯಚರಣೆ ನಡೆಸಿ ಐದು ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಏನಿದು ಪ್ರಕರಣ:
ಸುಳ್ಳದ ಸಹೋದರ ಮದ್ಯ ಆಸ್ತಿ ವಿಚಾರವಾಗಿ ಇದ್ದಂತಹ ಈ ವಿವಾದ ನ್ಯಾಯಾಲಯದ ವಿಚಾರಣೆಯಲ್ಲಿದೆ. ಅಲ್ದೇ ಪವನ್ ಸುಳ್ಳದ್ ದೂರುದಾರ ಮನೋಹರ ಅವರ ತಮ್ಮನ ಮಗನಾಗಿದ್ದು, ಸ್ನೇಹಿತರ ಬಳಿ ಹಾಗೂ ಫೈನಾನ್ಸ್ ನಲ್ಲಿ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದಾನೆ ಅಲ್ಲದೆ ಕುಡಿತಕ್ಕೆ ದಾಸನಾಗಿದ್ದಾನೆ. ಸಾಲಗಾರರ ಕಾಟಕ್ಕೆ ಬೇಸತ್ತು ತನ್ನ ಸ್ನೇಹಿತರೊಡನೆ ಸೇರಿ ತನ್ನ ದೊಡ್ಡಪ್ಪನಿಗೆ ಸ್ಕೆಚ್ ಹಾಕಿದ್ದಾನೆ.

ಪವನ್ ಸುಳ್ಳದ್ ಪರವಾಗಿ ಆರೋಪಿಗಳಾದ ಮಂಜುನಾಥ ಪೂಜಾರಿ ಹಾಗೂ ರಾಕೇಶ್ ಮಾನೆ ಬುಧವಾರ ಮಧ್ಯಾಹ್ನದ ವೇಳೆ ದೂರುದಾರ ಮನೋಹರ ಅವರ ಮನೆಗೆ ಬಂದು ನಿಮ್ಮ ಮಗ ಪವನ್ ನಿಗೆ ನಾವು ಸಾಲ ಕೊಟ್ಟಿದ್ದೇವೆ. ಅವನು ವಾಪಸ್ ನಮಗೆ ನೀಡುತ್ತಿಲ್ಲ. ಬದಲಾಗಿ ನಿಮ್ಮ ಆಸ್ತಿಯನ್ನು ಭಾಗ ಮಾಡಿದ್ರೆ ನಮ್ಮ ಹಣ ಬರುತ್ತೆ. ಬೇಗ ಆಸ್ತಿ ಭಾಗ ಮಾಡಿಕೊಡು ಸಾಲ ಮರುಪಾವತಿ ಮಾಡ್ರಿ ಇಲ್ಲವಾದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆ ಎಂದು ಧಮಕಿ ಹಾಕಿದ್ದಾರೆಂದು ದೂರಿನಲ್ಲಿ ಸ್ಪಷ್ವವಾಗಿ ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲದೇ ಆರೋಪಿಗಳ ಪೈಕಿ ನಾಲ್ವರು ರಾತ್ರಿ ವೇಳೆ ಮಾಸ್ಕ್ ಧರಿಸಿಕೊಂಡು ಬಂದು ಖಾರದ ಪುಡಿ ಎರಚಿ ಕುತ್ತಿಗೆ ಹಿಚುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆಂದು ದೂರುದಾರ ಮನೋಹರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಿನಲ್ಲ ಹಣದ ಆಸೆಗಾಗಿ ತಮ್ಮ ದೊಡ್ಡಪ್ಪನ್ನೇ ಟಾರ್ಗೇಟ್ ಮಾಡಿ ಖಾರದ ಪುಡಿ ಎರಚಿ ಈ ರೀತಿ ಹಲ್ಲೆ ನಡೆಸಲು ಕುಮ್ಮಕ್ಕು ನೀಡಿರುವುದು ನಿಜಕ್ಕೂ ದುರಂತ.